ಮೈಸೂರು : ನಾಳೆ ನಡೆಯಲಿರುವ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಯ ಮೈತ್ರಿಯ ಬಗ್ಗೆ ಮೂರು ಪಕ್ಷಗಳು ಇಲ್ಲಿಯವರೆಗೆ ಯಾವುದೇ ನಿರ್ಧಾರ ಮಾಡಿಲ್ಲ. ಅತಂತ್ರ ಪಾಲಿಕೆಯಲ್ಲಿ ಮೈತ್ರಿ ಅನಿವಾರ್ಯವಾಗಿದ್ದು, ಈ ಬಗ್ಗೆ ಸ್ಥಳೀಯ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್, ಬಿಜೆಪಿ ಶಾಸಕ ನಾಗೇಂದ್ರ ಹಾಗೂ ಜೆಡಿಎಸ್ನ ವಿಧಾನ ಪರಿಷತ್ ಸದಸ್ಯ ಮಂಜೇಗೌಡ ಮಾಧ್ಯಮಗಳಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲ: ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಯಾವುದೇ ಪಕ್ಷದ ಜೊತೆ ಕಾಂಗ್ರೆಸ್ ಮೈತ್ರಿ ಬೇಡ ಎಂದು ವರಿಷ್ಠರು ಹೇಳಿದ್ದಾರೆ. ಆದ್ದರಿಂದ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಜೊತೆಗೆ ಮೇಯರ್ ಚುನಾವಣಾ ವಿಚಾರದಲ್ಲಿ ನನಗೆ ಅಷ್ಟೊಂದು ಆಸಕ್ತಿ ಇಲ್ಲ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
ಕಳೆದ ಬಾರಿ ಆದ ಘಟನೆಯಿಂದ ಪಾಠ ಕಲಿತಿದ್ದೇನೆ. ಹೈ ಕಮಾಂಡ್ ನಿರ್ಧಾರಕ್ಕೆ ನಾನು ಬದ್ಧನಿದ್ದೇನೆ. ಯಾರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರ ಬಲ ಹೊಂದಿರುತ್ತಾರೋ ಅವರು ಮೇಯರ್ ಆಗುತ್ತಾರೆ. ಈ ವಿಚಾರದಲ್ಲಿ ಏನಾಗುತ್ತದೆ ಕಾದು ನೋಡೋಣ ಎಂದು ಹೇಳಿದರು.
ಪಕ್ಷದ ವರಿಷ್ಠರ ನಿರ್ಣಯವೇ ಅಂತಿಮ: ಬಿಜೆಪಿ ಸ್ವತಂತ್ರವಾಗಿ ಸ್ಪರ್ಧೆ ಮಾಡುವ ಅಭಿಪ್ರಾಯವನ್ನು ಸದಸ್ಯರು ಹೊಂದಿದ್ದಾರೆ. ವರಿಷ್ಠರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಅದಕ್ಕೆ ನಾವು ಬದ್ಧರಾಗಿದ್ದೇವೆ. ಕಳೆದ ವರ್ಷ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವಿನ ಮೈತ್ರಿಯ ಯಾವ ಮಾತುಕತೆಯೂ ಆಗಿಲ್ಲ. ಸದ್ಯದ ಸ್ಥಿತಿಯಲ್ಲಿ ಜೆಡಿಎಸ್ ನ ಮಂಜೇಗೌಡರ ಹೇಳಿಕೆ ತಪ್ಪು ಸಂದೇಶ ನೀಡುತ್ತದೆ ಎಂದು ಬಿಜೆಪಿಯ ಶಾಸಕ ಎಲ್. ನಾಗೇಂದ್ರ ಹೇಳಿದರು.
ಮೇಯರ್ ಚುನಾವಣೆಯಲ್ಲಿ ಬಿಜೆಪಿ ಮಾತಿಗೆ ತಪ್ಪುವುದಿಲ್ಲ..ಎಂಎಲ್ಸಿ ಮಂಜೇಗೌಡ: ಮೇಯರ್ ಚುನಾವಣೆಯಲ್ಲಿ ಬಿಜೆಪಿ ಮಾತಿಗೆ ತಪ್ಪುವುದಿಲ್ಲ. ನೂರಕ್ಕೆ ನೂರರಷ್ಟು ನಮ್ಮ ಪಕ್ಷದವರೇ ಮೇಯರ್ ಆಗುತ್ತಾರೆ. ಕಳೆದ ವರ್ಷ ನಡೆದ ಮಾತುಕತೆಗೆ ಬಿಜೆಪಿ ಬದ್ಧವಾಗಿದ್ದು, ಮಾತಿಗೆ ತಪ್ಪಿದರೆ ಬಿಜೆಪಿ ಬಗ್ಗೆ ಕೆಟ್ಟ ಸಂದೇಶ ರಾಜ್ಯದ ಜನರಿಗೆ ಹೋಗುತ್ತದೆ. ಶಾಸಕ ಜಿ.ಟಿ ದೇವೇಗೌಡರ ಜೊತೆ ಕುಮಾರಸ್ವಾಮಿ ಮಾತನಾಡಿದ್ದು, ಜಿಟಿಡಿ ಅವರು ನಮ್ಮ ಪಕ್ಷಕ್ಕೆ ಮತ ಹಾಕುತ್ತೇನೆ ಎಂದು ಹೇಳಿದ್ದಾರೆ. ಅದೇ ರೀತಿ ವಿಧಾನ ಪರಿಷತ್ ಸದಸ್ಯ ಮರಿ ತಿಬ್ಬೇಗೌಡ ಜೊತೆ ಮಾತುಕತೆ ನಡೆಸಿದ್ದೇವೆ ಅವರು ನಮ್ಮ ಪಕ್ಷಕ್ಕೆ ಮತ ಹಾಕುತ್ತಾರೆ ಎಂಬ ವಿಶ್ವಾಸವಿದೆ ಎಂದು ವಿಧಾನ ಪರಿಷತ್ ನ ಜೆಡಿಎಸ್ ಸದಸ್ಯ ಮಂಜೇಗೌಡ ಹೇಳಿಕೆ ನೀಡಿದರು.
ಇದನ್ನೂ ಓದಿ :ಮೈಸೂರು ದಸರಾ 2022: ಮರದ ಅಂಬಾರಿ ತಾಲೀಮು ಆರಂಭ