ಮೈಸೂರು: ಮೈಸೂರು ದಸರಾ ಆಚರಣೆ ಹಿನ್ನೆಲೆ 35 ಕೋಟಿ ರೂ. ಹಣಕ್ಕಾಗಿ ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತದಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೋವಿಡ್ ಹಿನ್ನೆಲೆ ಕಳೆದ ಎರಡು ವರ್ಷ ಸರಳವಾಗಿ ನಾಡಹಬ್ಬ ದಸರಾವನ್ನು ಆಚರಿಸಲಾಗಿತ್ತು. ಇದರಿಂದ ಪ್ರವಾಸೋದ್ಯಮದ ಮೇಲೆ ಬಲವಾದ ಪೆಟ್ಟು ಬಿದ್ದಿದೆ. ಈ ಬಾರಿ ಕೋವಿಡ್ ತಗ್ಗಿದ್ದು, ಅದ್ಧೂರಿ ದಸರಾ ಆಚರಿಸಲು ಈಗಾಗಲೇ ಮುಖ್ಯಮಂತ್ರಿ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಇದರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ನೇತೃತ್ವದಲ್ಲಿ ಸಭೆ ನಡೆದಿದೆ. ಮೈಸೂರು ಜಿಲ್ಲಾಧಿಕಾರಿ ದಸರಾದ ವಿಶೇಷ ಅಧಿಕಾರಿಯಾಗಿ ಹಾಗೂ ಇತರೆ ಸಮಿತಿಗಳಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ. ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ, ಯುವ ಸಂಭ್ರಮ, ಯುವ ದಸರಾ, ದಸರಾ ಚಲನಚಿತ್ರೋತ್ಸವ, ಕವಿಗೋಷ್ಠಿ, ದಸರಾ ಆಹಾರ ಮೇಳ, ದಸರಾ ನಾಟಕೋತ್ಸವ, ದಸರಾ ಫಲಪುಷ್ಪ ಪ್ರದರ್ಶನ, ದಸರಾ ಪುಸ್ತಕೋತ್ಸವ ಸೇರಿದಂತೆ ಅದ್ಧೂರಿ ಜಂಬೂ ಸವಾರಿಯ ಮೆರವಣಿಗೆಯ ಕಲಾ ತಂಡಗಳು, ಸ್ತಬ್ಧ ಚಿತ್ರ ಮೆರವಣಿಗೆ ಸೇರಿದಂತೆ ಹೊಸ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ನಿರ್ಧರಿಸಲಾಗಿದೆ. ಈ ಎಲ್ಲ ಕಾರ್ಯಕ್ರಮಗಳಿಗೆ ಪ್ರಯೋಜಕತ್ವದಿಂದ ಬಂದ ಹಣ ಹಾಗೂ ಇತರ ಎಲ್ಲಾ ಖರ್ಚು ವೆಚ್ಚಗಳಿಗೆ ಸುಮಾರು 35 ಕೋಟಿಗಳನ್ನು ನೀಡುವಂತೆ ಮಂಗಳವಾರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.