ಕರ್ನಾಟಕ

karnataka

ETV Bharat / state

ಟಿಪ್ಪು ನಮ್ಮ ಊರಿನವರೇ ಅಲ್ವಾ? ಅವರೇನೂ ಹೊರ ದೇಶದವರಾ?: ಸಚಿವ ಹೆಚ್​​ ಸಿ ಮಹದೇವಪ್ಪ ಪ್ರಶ್ನೆ - Tipu name proposal

ಟಿಪ್ಪು ನಮ್ಮ ಊರಿನವರೇ ಅಲ್ವಾ? ಅವರೇನೂ ಹೊರ ದೇಶದವರಾ? ಎಂದು ಸಚಿವ ಡಾ. ಹೆಚ್​​ ಸಿ ಮಹದೇವಪ್ಪ ಪ್ರಶ್ನಿಸಿದ್ದಾರೆ.

ಸಚಿವ ಹೆಚ್​​ ಸಿ ಮಹದೇವಪ್ಪ
ಸಚಿವ ಹೆಚ್​​ ಸಿ ಮಹದೇವಪ್ಪ

By ETV Bharat Karnataka Team

Published : Dec 18, 2023, 2:36 PM IST

ಮೈಸೂರು: ಟಿಪ್ಪು ನಮ್ಮ ಊರಿನವರೇ ಹೊರತು ಹೊರದೇಶದವರಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಖಾತೆಯ ಸಚಿವ ಡಾ. ಹೆಚ್​​ ಸಿ ಮಹದೇವಪ್ಪ ಹೇಳಿದರು. ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರನ್ನು ಇಡಬೇಕು ಎಂಬ ಪ್ರಸ್ತಾಪ ವಿಚಾರಕ್ಕೆ ಪ್ರತಿಪಕ್ಷ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ತಮ್ಮ‌ ನಿವಾಸದ ಬಳಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಟಿಪ್ಪು ನಮ್ಮ ಊರಿನವರೇ ಅಲ್ವಾ? ಅವರೇನೂ ಹೊರ ದೇಶದವರಾ? ಭೂ ಸುಧಾರಣೆ ಕಾಯ್ದೆ ತಂದಿದ್ದು ಟಿಪ್ಪು, ದೇವದಾಸಿ ಪದ್ಧತಿ ನಿರ್ಮೂಲನೆ ಮಾಡಿದ್ದು ಟಿಪ್ಪು ಅಲ್ವಾ? ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನ ಬಗ್ಗೆ ನಮ್ಮ ತಕಾರರು ಇಲ್ಲ. ಟಿಪ್ಪು ವಿಚಾರದಲ್ಲಿ ಕೆಲವರು ಅಭಿಪ್ರಾಯ ಹೇಳಿದ್ದಾರೆ. ಅಭಿಪ್ರಾಯ ಹೇಳೋದು ಅಪರಾಧವಾ? ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ವಾ? ಎಂದು ಹೇಳಿದ್ದಾರೆ ಎಂದು ಸಚಿವರು ಪ್ರಶ್ನಿಸಿದ್ದಾರೆ.

ವಿಮಾನ ನಿಲ್ದಾಣ ವಿಚಾರದಲ್ಲಿ ಕ್ಯಾಬಿನೆಟ್ ತೀರ್ಮಾನವಾಗಿದೆ. ಅದನ್ನು ತಿರಸ್ಕರಿಸಲು ಸಾಧ್ಯವಾ? ಹೆಸರು ಇಡುವುದು ಬಿಡುವುದು ಬೇರೆ ವಿಚಾರ. ಆದರೆ, ಅವರನ್ನು ದೇಶ ದ್ರೋಹಿ ಅಂತಾ ಬಿಂಬಿಸೋದು ಸರಿಯಲ್ಲ ಎಂದು ಅವರು ಹೇಳಿದರು.

ಕೋವಿಡ್ ಪ್ರಕರಣ ಹೆಚ್ಚಳ: ಪಕ್ಕದ ರಾಜ್ಯ ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಡಾ. ಹೆಚ್​​ ಸಿ ಮಹದೇವಪ್ಪ, ಈ ವಿಚಾರದಲ್ಲಿ ಮೈಸೂರು ಜಿಲ್ಲಾಡಳಿತದ ಜೊತೆಗೆ ಸಭೆ ಮಾಡುತ್ತೇನೆ. ಮೈಸೂರು ಕೇರಳದ ಗಡಿ ಜಿಲ್ಲೆಯಾದ ಕಾರಣ ಇವತ್ತೇ ಸಭೆ ಮಾಡುತ್ತೇನೆ ಎಂದು ತಿಳಿಸಿದರು.

ಇಬ್ಬರು ಅಪರಿಚಿತ ವ್ಯಕ್ತಿಗಳು ಲೋಕಸಭೆ ಕಲಾಪದ ವೇಳೆ ಹೊಗೆ ಬಾಂಬ್ ಸಿಡಿಸಿದ ಘಟನೆಯ ಬಗ್ಗೆ ಮಾತನಾಡಿದ ಸಚಿವರು, ಇದು ಗಂಭೀರವಾದ, ರಾಷ್ಟ್ರೀಯ ಭದ್ರತಾ ಲೋಪ ವಿಚಾರ. ಆರೋಪಿಗಳಿಗೆ ಬೇರೆಯವರು ಲೇಟರ್ ಕೊಟ್ಟಿದ್ದರೆ ಮೈಸೂರು ಜಿಲ್ಲೆಯ ಗತಿ ಏನಾಗುತ್ತಿತ್ತು? ಲೇಟರ್ ಕೊಟ್ಟಿದ್ದ ಕಾರಣ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಒಂದೊಂದು ಬಾರಿ ಗಡಿಪಾರು ಆದವರು, ಕೊಲೆ ಆರೋಪಿಗಳು ನಮ್ಮ ಜೊತೆಯೆ ಫೋಟೋ ತೆಗೆಸಿಕೊಂಡಿರುತ್ತಾರೆ. ಅದನ್ನು ನಾವು ಗಮನಿಸೋಕೆ ಆಗುತ್ತಾ? ಇದು ಅದೇ ರೀತಿ ಎಂದು ಅವರು ಹೇಳಿದರು.

ಇದನ್ನೂ ಓದಿ:ಸಂಸತ್ ಭವನದ ಮೇಲೆ ನಡೆದಿರುವ ದಾಳಿ ಖಂಡನೀಯ ಮತ್ತು ಆಘಾತಕಾರಿ: ಸಿಎಂ ಸಿದ್ದರಾಮಯ್ಯ

ರಾಷ್ಟ್ರೀಯ ಭದ್ರತಾ ಲೋಪ ವಿಚಾರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ಹಿಂದೆ ಆತಂಕ ವ್ಯಕ್ತಪಡಿಸಿದ್ದರು. ಘಟನೆ ನಡೆದ ಬಳಿಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದ ಅವರು, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಸಂಸತ್ ಭವನದ ಮೇಲೆ ನಡೆದಿರುವ ದಾಳಿ ಖಂಡನೀಯ, ಮಾತ್ರವಲ್ಲ ಅತ್ಯಂತ ಆಘಾತಕಾರಿಯಾದದು ಎಂದಿದ್ದರು.

ABOUT THE AUTHOR

...view details