ಮೈಸೂರು: ಸತತವಾಗಿ ಸುರಿಯುತ್ತಿರುವ ಮಳೆಯಿಂದ ಪಾರಂಪರಿಕ ಕಟ್ಟಡಗಳು ಕುಸಿದು ಬೀಳುತ್ತಿದ್ದು, ಅದರ ಸಾಲಿಗೆ ಇಂದು ಮೈಸೂರಿನ ಮಹಾರಾಣಿ ಕಾಲೇಜಿನ ಕಟ್ಟಡವು ಸೇರಿದೆ. ಕಾಲೇಜು ಕಟ್ಟಡ ಕುಸಿದು ಬೀಳುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಮಹಾರಾಣಿ ಕಾಲೇಜಿನ ಕಟ್ಟಡ ಕುಸಿತ ಸಾಂಸ್ಕೃತಿಕ ನಗರವಾದ ಮೈಸೂರಿನಲ್ಲಿ 100 ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳಿವೆ. ಇವುಗಳ ಸರಿಯಾದ ನಿರ್ವಹಣೆ ಇಲ್ಲದೇ ಹಾಗೂ ಸತತವಾಗಿ ಬೀಳುತ್ತಿರುವ ಮಳೆಯಿಂದ ಈ ಪಾರಂಪರಿಕ ಕಟ್ಟಡಗಳು ಧರೆಗುರುಳುತ್ತಿವೆ. ಇಂದು ಬೆಳಗ್ಗೆ 10.30 ರ ವೇಳೆಯಲ್ಲಿ ಇದ್ದಕ್ಕಿದ್ದಂತೆ ದಿಢೀರನೇ ಮಹಾರಾಣಿ ಕಾಲೇಜಿನ ಲ್ಯಾಬ್ ಕಟ್ಟಡ ಕುಸಿದು ಬಿದ್ದಿದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಟ್ಟಡ ಕುಸಿದ ಸುದ್ದಿ ತಿಳಿದ ತಕ್ಷಣವೇ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಹಾರಾಣಿ ಕಾಲೇಜಿನ ಕಟ್ಟಡ ಕುಸಿತ ನಿರಂತರವಾಗಿ ಕುಸಿಯುತ್ತಿರುವ ಪಾರಂಪರಿಕ ಕಟ್ಟಡಗಳು: ಸಾಂಸ್ಕೃತಿಕ ನಗರಿ ಮೈಸೂರು ಪಾರಂಪರಿಕ ನಗರಿಯು ಆಗಿದ್ದು, ಈ ವರ್ಷ ಬೀಳುತ್ತಿರುವ ಸತತ ಮಳೆಯಿಂದ ಈಗಾಗಲೇ ಅಂಬಾ ವಿಲಾಸ ಅರಮನೆಯ ರಕ್ಷಣಾ ಕೋಟೆ ಕುಸಿದಿದೆ. ಇಂದು ಬೆಳಗ್ಗೆ ಚಾಮುಂಡಿ ಬೆಟ್ಟದ ನಂದಿ ಮಾರ್ಗ ಸಹಾ ಕುಸಿದಿದೆ. ಇದರ ಜೊತೆಗೆ ಪಾರಂಪರಿಕ ಮಹಾರಾಣಿ ಕಾಲೇಜು ಕಟ್ಟಡ ಕುಸಿದಿದ್ದು, ಜನರಲ್ಲಿ ಆತಂಕ ಮೂಡಿದೆ.
ಇನ್ನು ಸರಿಯಾದ ನಿರ್ವಹಣೆ ಇಲ್ಲದೇ ಪಾರಂಪರಿಕ ಕಟ್ಟಡಗಳಲ್ಲಿ ಗಿಡ - ಗಂಟಿಗಳು ಬೆಳೆದು ಹಲವು ಕಟ್ಟಡಗಳು ಅಪಾಯದ ಸ್ಥಿತಿಯಲ್ಲಿದೆ. ಪಾರಂಪರಿಕ ಕಟ್ಟಡಗಳಲ್ಲಿ ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು, ಕಾಲೇಜುಗಳು ಇದ್ದು ಇಲ್ಲಿಗೆ ಹೋಗಲು ಜನರು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಪಾರಂಪರಿಕ ಕಟ್ಟಡಗಳಲ್ಲಿ ಕೆಲಸ ಮಾಡುವ ಜನರು ಭಯದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.