ಮೈಸೂರು :ಸಾಂಸ್ಕೃತಿಕ ಜಿಲ್ಲೆ, ಪ್ರವಾಸಿಗರ ನಗರಿ, ಪಾರಂಪರಿಕ ನಗರಿ, ಅರಮನೆಗಳ ನಗರಿ ಎಂಬ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಮೈಸೂರು, ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ 2ನೇ ಸ್ಥಾನ ಪಡೆದಿದೆ.
ಈ ಬಾರಿಯ ರಾಜ್ಯ ಬಜೆಟ್ನಲ್ಲಿ ಜಿಲ್ಲೆಯ ನಿರೀಕ್ಷೆಗಳೇನು, ನೆನಗುದಿಗೆ ಬಿದ್ದಿರುವ ಯೋಜನೆಗಳೇನು ಹಾಗೂ ಹೊಸದಾಗಿ ಜಿಲ್ಲೆಗೆ ಯಾವ ಯೋಜನೆಗಳು ಬೇಕು ಎಂದು ಜನರು ತಮ್ಮ ನಿರೀಕ್ಷೆಗಳನ್ನ ಸರ್ಕಾರದ ಮುಂದಿಟ್ಟಿದ್ದಾರೆ.
ಪ್ರವಾಸೋದ್ಯಮಕ್ಕೆ ವಿಶೇಷ ಪ್ಯಾಕೇಜ್ ನಿರೀಕ್ಷೆ :ಪ್ರತಿ ವರ್ಷ ಮೈಸೂರಿಗೆ ಮೂವತ್ತು ಲಕ್ಷಕ್ಕೂ ಅಧಿಕ ಜನರು ದೇಶ-ವಿದೇಶಗಳಿಂದ ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ನೆಲೆಕಚ್ಚಿದ್ದು, ಇದರ ಚೇತರಿಕೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕಿದೆ.
ಪಾರಂಪರಿಕ ನಗರಿ ಎಂದು ಘೋಷಣೆಗೆ ಒತ್ತಾಯ :ಮೈಸೂರು ಪಾರಂಪರಿಕ ಕಟ್ಟಡಗಳಿರುವ ನಗರವಾಗಿದೆ. ಆದ್ದರಿಂದ ಈ ನಗರವನ್ನ ಪಾರಂಪರಿಕ ನಗರವೆಂದು ಘೋಷಣೆ ಮಾಡಿದರೆ, ಕೇಂದ್ರ ಸರ್ಕಾರದಿಂದ 1000 ಕೋಟಿಗೂ ಅಧಿಕ ಅನುದಾನ ಬರಲಿದೆ. ರಾಜ್ಯ ಸರ್ಕಾರ ಕೇವಲ ಪಾರಂಪರಿಕ ನಗರ ಎಂದು ಈ ಬಜೆಟ್ನಲ್ಲಿ ಘೋಷಣೆ ಮಾಡಲಿ ಎನ್ನುವ ಒತ್ತಾಯ ಕೇಳಿ ಬಂದಿದೆ.
ನಿರೀಕ್ಷೆಗಳು :
- ಮೈಸೂರು ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ ಭೂಮಿ ನೀಡವಂತೆ ಆಗ್ರಹ ಪಡಿಸಿದ್ದು, ರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವಾಗಿ ಅಭಿವೃದ್ಧಿ ಮಾಡಬೇಕಿದೆ.
- ಮೈಸೂರು ನಗರ ಬೆಳೆಯುತ್ತಿದ್ದು ಬೆಂಗಳೂರು ಮಾದರಿಯಲ್ಲಿ ಪ್ರತ್ಯೇಕ ಜಲ ಮಂಡಳಿ ಸ್ಥಾಪನೆಗೆ ನಿರ್ಧಾರ.
- ಟೂರಿಸಂ ಹಬ್ ಗಾಗಿ ವಿಶೇಷ ಪ್ಯಾಕೇಜ್ ಘೋಷಣೆ.
- ಸರ್ಕಾರಿ ಆಸ್ಪತ್ರೆಗಳಿಗೆ ಕಾಯಕಲ್ಪ ನೀಡಲು ವಿಶೇಷ ಪ್ಯಾಕೇಜ್ ಘೋಷಣೆ.
- ನಗರದ ರಸ್ತೆ ಅಭಿವೃದ್ಧಿಗೆ ಹೆಚ್ಚುವರಿ ಹಣ ಬಿಡುಗಡೆ.
- ಮೈಸೂರು ನಗರ ಪಾಲಿಗೆ ನಷ್ಟದಲ್ಲಿ ಇದೆ. ಹಾಗಾಗಿ, ವಿಶೇಷ ಅನುದಾನ ನೀಡಬೇಕು.
- ಮೈಸೂರು ನಗರದ ಹೊರವಲಯದಲ್ಲಿ ಇರುವ ಕೈಗಾರಿಕಾ ಅಭಿವೃದ್ಧಿಗೆ ಒತ್ತು ನೀಡಬೇಕು.
- ನೆನೆಗುದಿಗೆ ಬಿದ್ದಿರುವ ರೈಲ್ವೆ ಟರ್ಮಿನಲ್ ಯೋಜನೆ ಹಾಗೂ ಕಬಿನಿ ಹಿನ್ನೀರಿನಲ್ಲಿ 50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಯೋಜನೆಗೆ ಅನುಮೋದನೆ ನೀಡಬೇಕು.
- ಇದರ ಜೊತೆಗೆ ಹೊಸ ಯೋಜನೆಗಳನ್ನ ಈ ಬಜೆಟ್ನಲ್ಲಿ ನೀಡಬೇಕು ಎಂಬುದು ಜನರ ಆಶಯವಾಗಿದೆ.
ಇನ್ನೂ ಬಜೆಟ್ ಕುರಿತು ಕೆಪಿಸಿಸಿ ವಕ್ತಾರರಾದ ಎಂ ಲಕ್ಷ್ಮಣ್ ರವರು ಈಟಿವಿ ಭಾರತ ನೊಂದಿಗೆ ಮಾತನಾಡಿದ್ದು, ರಾಜ್ಯ ಸರ್ಕಾರದ ಬಜೆಟ್ ಬಗ್ಗೆ ಹೆಚ್ಚಾಗಿ ನಿರೀಕ್ಷೆ ಇಲ್ಲ, ಆದರೆ ಮೈಸೂರು ಜಿಲ್ಲೆಯ ಅಭಿವೃದ್ಧಿಗಾಗಿ ಒತ್ತು ನೀಡಿ ಅನುದಾನ ನೀಡಿದರೆ ಮೈಸೂರು ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಹೇಳಿದ್ದಾರೆ.