ಲೋಕಸಭೆ ಚುನಾವಣೆಯ ಸಿದ್ಧತೆ ಬಗ್ಗೆ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಮಾತನಾಡಿದರು. ಮೈಸೂರು :ಲೋಕಸಭೆ ಚುನಾವಣೆಯಲ್ಲಿಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ, ಚುನಾವಣೆಗೆ ಯಾರು ಅಭ್ಯರ್ಥಿಯಾಗಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ. ಪಕ್ಷ ಸೂಚಿಸಿದರೆ ನಾನೇ ಅಭ್ಯರ್ಥಿಯಾಗುತ್ತೇನೆ ಎಂದು ಮೈಸೂರಿನಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿಕೆ ನೀಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಲೋಕಸಭೆಗೆ 7 ರಿಂದ 8 ತಿಂಗಳು ಬಾಕಿ ಇದೆ. ಇದಕ್ಕಾಗಿ ಪಕ್ಷವನ್ನು ಸಜ್ಜುಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಕುಮಾರಸ್ವಾಮಿ ಮಾಡಿದ ಕೆಲಸಗಳು ಹಾಗೂ ಪಂಚರತ್ನ ಯೋಜನೆಯನ್ನು ಜನರಿಗೆ ತಿಳಿಸುವ ದೃಷ್ಟಿಯಿಂದ ಪಕ್ಷ ಸಂಘಟನೆ ಮಾಡುತ್ತೇವೆ" ಎಂದರು.
"ರಾಜ್ಯದ ಜನರು ಬುದ್ದಿವಂತರು, ಅಧಿಕಾರವನ್ನು ಕಾಂಗ್ರೆಸ್ಗೆ ಕೊಟ್ಟಿದ್ದಾರೆ. ದೇಶದ ಅಧಿಕಾರವನ್ನು ಮುಂದಿನ ಚುನಾವಣೆಯಲ್ಲಿ ಸಮರ್ಥ ನಾಯಕರ ಕೈಗೆ ಕೊಡಲಿದ್ದಾರೆ. ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ" ಎಂದು ತಿಳಿಸಿದರು.
"ಜೆಡಿಎಸ್ ಪಕ್ಷಕ್ಕೆ ಸೋಲು, ಗೆಲುವು ಹೊಸದಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಾಗಿದೆ. ಮುಂದಿನ ಲೋಕಸಭಾ ಚುನಾವಣೆ ಹಾಗೂ ಇತರ ಚುನಾವಣೆಗಳಿಗೆ ರಾಜ್ಯ ಪ್ರವಾಸ ಮಾಡಿ, ಪಕ್ಷ ಕಟ್ಟುತ್ತೇವೆ. ಇದಕ್ಕಾಗಿ ರಾಷ್ಟ್ರೀಯ ಅಧ್ಯಕ್ಷರು 20 ಸದಸ್ಯರ ಕೋರ್ ಕಮಿಟಿ ರಚಿಸಿದ್ದು, ನನ್ನನ್ನು ಕಮಿಟಿಗೆ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಇದಕ್ಕಾಗಿ ದೇವೇಗೌಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನೊಂದಿಗೆ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್, ವೈ.ಎಸ್.ವಿ.ದತ್ತ ಇರುತ್ತಾರೆ. ಆಗಸ್ಟ್ 15ರಂದು ದೇವೇಗೌಡರು, ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಸದಸ್ಯರು ಸಭೆ ಸೇರಿ, ಪಕ್ಷ ಸಂಘಟನೆಯ ರೂಪುರೇಷೆಗಳನ್ನು ತಯಾರು ಮಾಡಲಾಗುತ್ತದೆ" ಎಂದು ಜಿ.ಟಿ.ದೇವೇಗೌಡ ಇದೇ ಸಂದರ್ಭದಲ್ಲಿ ತಿಳಿಸಿದರು.
ಇದನ್ನೂ ಓದಿ:ಕುಮಾರಸ್ವಾಮಿ, ದೇವೇಗೌಡರು ಯಾವುದೇ ಸರ್ಕಾರ ಬೀಳಿಸಿಲ್ಲ: ಶಾಸಕ ಜಿ ಟಿ ದೇವೇಗೌಡ