ಮೈಸೂರು: ಜೆಡಿಎಸ್ ಪಕ್ಷದ ಮುಖಂಡರೊಂದಿಗೆ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಹೆಚ್ ಡಿ ಕುಮಾರಸ್ವಾಮಿ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಗೆ ಹಾಗೂ ಪಂಚರತ್ನ ಯಾತ್ರೆ ಯಶಸ್ವಿ ಆಗಲೆಂದು ವಿಶೇಷ ಪೂಜೆ ಸಲ್ಲಿಸಿದರು.
2018 ರಲ್ಲಿ ಚಾಮುಂಡಿ ಬೆಟ್ಟದಿಂದಲೇ ಕುಮಾರ ಪರ್ವಕ್ಕೆ ಹೆಚ್‌ಡಿಕೆ ಚಾಲನೆ ಕೊಟ್ಟಿದ್ದರು. ಪೂಜೆ ನಂತರ ಜೆಡಿಎಸ್ ಪಟ್ಟಿ ಬಿಡುಗಡೆಗೆ ಹೆಚ್.ಡಿ.ರೇವಣ್ಣ ತಕರಾರು ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ರೇವಣ್ಣ ನಮ್ಮ ಪಕ್ಷದ ಜ್ಯೋತಿಷಿಗಳಾಗಿದ್ದಾರೆ. ಇಂದು ಸಮಯ ಪ್ರಸಕ್ತವಾಗಿಲ್ಲ ಎಂದು ತಕರಾರು ತೆಗೆದಿದ್ದಾರೆ. 100 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಸೂಕ್ತ ಸಮಯ ನೋಡಿಕೊಂಡು ಬಿಡುಗಡೆ ಮಾಡುತ್ತೇವೆ. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಹೆಚ್ ಡಿ ದೇವೇಗೌಡರ ನೇತೃತ್ವದಲ್ಲಿ ಪಟ್ಟಿ ಬಿಡುಗಡೆ ಮಾಡುತ್ತಾರೆ ಎಂದರು.
ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಬಸ್ ನಿಲ್ದಾಣ ವಿವಾದದ ಕುರಿತು ಮಾತನಾಡಿ, ಶಾಸಕರೇ ಕಣ್ಣೀರಿಟ್ಟರೆ ಅವರಿಗೆ ಮತ ಕೊಟ್ಟ ಜನರ ಗತಿ ಏನು?, ಬಿಜೆಪಿ ಶಾಸಕರು ಕಣ್ಣೀರು ಹಾಕಿರುವುದನ್ನು ನಾನು ನೋಡಿದ್ದೇನೆ. ಸಂಸದರು ಕಣ್ಣೀರು ಹಾಕಿಸಿರುವುದನ್ನು ಗಮನಿಸಿದ್ದೇನೆ. ಇವರಿಗೆ ಮತ ನೀಡಿದ ಜನರ ಕತೆ ಏನು ?. ಮಸೀದಿಯನ್ನಾದರೂ ಮಾಡಿ, ಗೋಪುರವನ್ನಾದರೂ ಮಾಡಿ. ಜನರಿಗೆ ನೆರಳು ಕೊಡಿ. ಕೆಡಹುವ ಕೆಲಸ ಮಾಡಬೇಡಿ. ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಬೇಡಿ ಎಂದು ಹೇಳಿದರು.
ಇದನ್ನೂ ಓದಿ:ಜೆಡಿಎಸ್‌ನಿಂದ 'ಘರ್ ವಾಪಸಿ' ಪ್ರಯತ್ನ: ಮತ್ತೆ ಪಕ್ಷಕ್ಕೆ ಬರ್ತಾರಾ ಉಚ್ಛಾಟಿತ ಶಾಸಕ ಶ್ರೀನಿವಾಸ್?
ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಪಂಚರತ್ನ ಸಮಾರೋಪ ಸಮಾರಂಭ ಮಾಡುತ್ತೇವೆ. ಮಾರ್ಚ್ ನಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡುತ್ತೇವೆ. 123 ಗುರಿ ಇಟ್ಟುಕೊಂಡು ನಾವು ಹೊರಟಿದ್ದೇವೆ. ಮುಂದಿನ ದಿನಗಳಲ್ಲಿ ರಾಜಕೀಯ ಸಮೀಕರಣ ಆಗಬಹುದು. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಜನತಾ ಪರಿವಾರದಿಂದ ಹೋದವರೇ ಇದ್ದಾರೆ. ಮನ ಪರಿವರ್ತನೆಯಾಗಿ ಮತ್ತೆ ಪಕ್ಷಕ್ಕೆ ಬರಬಹುದು. ಅವರು ಬಂದಾಗ ಏನು ತೀರ್ಮಾನ ಮಾಡಬೇಕು ಎಂದು ನೋಡೋಣ ಎಂದರು.
ಇದನ್ನೂ ಓದಿ:ನಾವು 50 ಆಕಳ ಕಟ್ಟಿದ್ರೂ ಒಂದೇ ಹೋರಿ ಕಟ್ಟೋದು: ಸಿಎಂ ಇಬ್ರಾಹಿಂ ವರಸೆ ನೋಡಿ!
ಖಾಸಗಿ ಕಂಪನಿ ಮುಂದಿಟ್ಟುಕೊಂಡು ಮತದಾರರ ಡೇಟಾ ಸಂಗ್ರಹ ಮಾಡುತ್ತಿರುವ ವಿಚಾರವಾಗಿ ಮಾತನಾಡಿ, ಇದರಲ್ಲಿ ಕೆಲವು ತಪ್ಪುಗಳು ಆಗಿವೆ. ಸರ್ಕಾರದ ಕೆಲ ಅಧಿಕಾರಿಗಳು ಭಾಗಿಯಾಗಿದ್ದಾರೆ. ಡೇಟಾ ಸಂಗ್ರಹ ಮಾಡುವ ಸಿಬ್ಬಂದಿ ಸರ್ಕಾರಿ ನೌಕರರು ಎಂದು ಮಾಹಿತಿ ಇದೆ. ಸರ್ಕಾರದ ನಡವಳಿಕೆಯಿಂದ ಪ್ರತಿಯೊಬ್ಬರಿಗೂ ಸಂಶಯ ಮೂಡುತ್ತದೆ. ಈ ಬಾರಿ ಬಿಜೆಪಿ ಏನೇ ಮಾಡಿದ್ರು ನಾಡಿನ ಜನರು ಬೇಸತ್ತು ಹೋಗಿದ್ದಾರೆ ಎಂದು ಕುಟುಕಿದರು. ಈ ವೇಳೆ ಜಿಟಿಡಿ, ಬಂಡಪ್ಪ ಕಾಶಂಪುರ್, ಸಿಎಸ್ ಪುಟ್ಟರಾಜು ಭಾಗಿಯಾಗಿದ್ದರು.
ಅಪ್ಪ, ಅಮ್ಮನ ಆಶೀರ್ವಾದ ಪಡೆದ ಹೆಚ್‌ಡಿಕೆ ಅಪ್ಪ, ಅಮ್ಮನ ಆಶೀರ್ವಾದ ಪಡೆದ ಹೆಚ್‌ಡಿಕೆ:ಮೈಸೂರಿಗೆ ಆಗಮಿಸುವ ಮುನ್ನ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ತೆರಳಿದ ಕುಮಾರಸ್ವಾಮಿ, ದೇವೇಗೌಡರ ಕಾಲಿಗೆ ನಮಸ್ಕರಿಸಿದರು. ನಂತರ ದೇವರ ಕೋಣೆಯಲ್ಲಿದ್ದ ತಾಯಿ ಚೆನ್ನಮ್ಮ ಅವರ ಬಳಿ ತೆರಳಿ ಆಶೀರ್ವಾದ ಪಡೆದುಕೊಂಡರು. ಈ ವೇಳೆ ದೇವೇಗೌಡ ಹಾಗೂ ಚೆನ್ನಮ್ಮ ಅವರು ಅಕ್ಷತೆಕಾಳು ಹಾಕಿ ಕುಮಾರಸ್ವಾಮಿ ಅವರ ತಲೆ ಮುಟ್ಟಿ ಆಶೀರ್ವದಿಸಿದರು.