ಮೈಸೂರು: ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೆರಳಲ್ಲ. ಬೊಮ್ಮಾಯಿ ರಾಜ್ಯಕ್ಕೆ ಹೊಸ ಭರವಸೆ ಮೂಡಿಸಿದ್ದಾರೆ. ಜನರ ಸುತ್ತ ಅಭಿವೃದ್ಧಿ ಯೋಜನೆಗಳು ಸುತ್ತಬೇಕೆ ಹೊರತು ಅಭಿವೃದ್ಧಿಯ ಸುತ್ತ ಜನ ಸುತ್ತಬಾರದು ಎಂದು ಬೊಮ್ಮಾಯಿ ತೋರಿಸಿಕೊಟ್ಟಿದ್ದಾರೆ ಎಂದು ಬಿಜೆಪಿ ಎಂಎಲ್ಸಿ ಹೆಚ್. ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರು ಸಿಎಂ ಹಾಗೂ ಪಕ್ಷದ ಅಧ್ಯಕ್ಷರಾಗಿರುತ್ತಾರೋ ಅವರದ್ದೇ ನಾಯಕತ್ವ ಇರುತ್ತದೆ. ಸಾಮೂಹಿಕ ನಾಯಕತ್ವ ಇದ್ದರೂ ಒಬ್ಬ ಮುಂದಾಳು ಬೇಕು. ಅದು ಬಿಜೆಪಿಯಲ್ಲಿ ಬಸವರಾಜ ಬೊಮ್ಮಾಯಿ ಆಗಿದ್ದಾರೆ ಎಂದು ಅಮಿತ್ ಶಾ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದರು.
ಮರು ಸರ್ವೇ ಮೂಲಕ ಸತ್ಯ ಹೊರಬರಲಿ: ಸರ್ಕಾರಿ ಭೂಮಿ ಒತ್ತುವರಿಗೆ ಸರ್ವೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಹೆಚ್.ವಿಶ್ವನಾಥ್, ಚಿನ್ನ ಉಜ್ಜಿದಷ್ಟು ಹೊಳಪು ಬರುತ್ತದೆ. ಅದರಂತೆ ಮರು ಸರ್ವೇ ನಡೆದ್ರೆ ಸತ್ಯ ಹೊರಬರುತ್ತದೆ ಎಂದು ಹೇಳಿದರು.
ಸಾ. ರಾ. ಮಹೇಶ್ ಒತ್ತುವರಿ ಮಾಡಿಲ್ಲವಾದರೆ ಭಯ ಏಕೆ ? :ಒತ್ತುವರಿ ಮಾಡಿಕೊಂಡವರಿಗೆ ಸರ್ವೇಯ ಭಯವಿರುತ್ತದೆ. ಹಿಂದಿನ ಸರ್ವೇ ವರದಿ ಪ್ರಾಮಾಣಿಕವಾಗಿರಲಿಲ್ಲ. ಇದನ್ನು ನಾನು ಮೊದಲೇ ಹೇಳಿದ್ದೆ. ವರದಿ ಹೇಗೆ ನೀಡಿದರು ಅನ್ನೋದು ಜನರಿಗೂ ಗೊತ್ತಿದೆ. ಎಸ್. ಟಿ. ಸೋಮಶೇಖರ್ ಸರ್ಕಾರದ ಭಾಗ, ಅವರು ಈ ರೀತಿ ಹೇಳಿಕೆ ನೀಡಬಾರದು. ಅಧಿಕಾರಿಗೆ ಸರ್ಕಾರವೇ ಅಧಿಕಾರ ನೀಡಿದೆ. ಆ ಅಧಿಕಾರ ಬಳಸಿ ಅವರು ಆದೇಶ ಮಾಡಿದ್ದಾರೆ. ಇದನ್ನು ವಿರೋಧಿಸುವುದು ಸರಿಯಲ್ಲ ಎಂದು ಹೆಚ್. ವಿಶ್ವನಾಥ್ ಹೇಳಿದರು.
ಮುಂದೆ ಮೈಸೂರು ಕಟ್ಟಿಸಿದ್ದು ನಾನೇ ಎನ್ನುತ್ತಾರೆ:ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕ್ರೆಡಿಟ್ ವಿಚಾರವಾಗಿ ಪ್ರತಿಕ್ರಿಯಿಸಿ, ಸಂಸದ ಪ್ರತಾಪಸಿಂಹ ಮುಂದೆ ಮೈಸೂರು ಕಟ್ಟಿಸಿದ್ದು ತಾನೇ ಅನ್ನುತ್ತಾರೆ. ಅವರು ತಮ್ಮ ಸ್ಥಾನಕ್ಕೆ ಗೌರವಕೊಟ್ಟು ಮಾತನಾಡಲಿ. ನಿನ್ನೆಯ ಪತ್ರವೂ ಸಂಸದರ ಸ್ಥಾನಕ್ಕೆ ಗೌರವ ತರುವಂತದ್ದಲ್ಲ. ಹಿಂದಿನ ಸರ್ಕಾರದಲ್ಲೇ ದಶಪಥ ರಸ್ತೆ ಯೋಜನೆಗೆ ದಾಖಲೆ ಇದೆ. ಹೀಗಾಗಿ ಯೋಜನೆ ತಮ್ಮದೇ ಅಂತಾ ಹೇಳಿಕೊಳ್ಳುವುದು ಸರಿಯಲ್ಲ ಎಂದು ಹೆಚ್ ವಿಶ್ವನಾಥ್ ಅವರು ಸಂಸದ ಪ್ರತಾಪಸಿಂಹ ವಿರುದ್ಧ ಗುಡುಗಿದರು.
ಉಳಿದ ಖಾತೆಗಳನ್ನು ಸಿಎಂ ಹಂಚಬೇಕು: ಉಳಿದಿರುವ ಸಚಿವ ಸ್ಥಾನ ವಿಚಾರವಾಗಿ ಪ್ರತಿಕ್ರಿಯಿಸಿ, ಯಾವುದೇ ಕಾರಣಕ್ಕೂ ಅದನ್ನು ಸಿಎಂ ಇಟ್ಟುಕೊಳ್ಳಬಾರದು. ಖಾತೆಗಳನ್ನು ಆದಷ್ಟು ಬೇಗ ಹಂಚಿಕೆ ಮಾಡಬೇಕು. ಬಹುಶಃ ವಿಧಾನಸಭೆ ಅಧಿವೇಶನ ಮುಗಿದ ನಂತರ ಹಂಚಿಕೆ ಮಾಡಲಿದ್ದಾರೆ ಎಂದು ಹೇಳಿದರು.