ಕರ್ನಾಟಕ

karnataka

ETV Bharat / state

ಸ್ಕೂಟಿ ಕಲಿಸಲು ಬಂದು ಮನೆಗೆ ಕನ್ನ ಆರೋಪ.. ಮೈಸೂರಲ್ಲಿ ಟ್ರೈನರ್​ ಸೇರಿ ಮೂವರು ಮಹಿಳೆಯರು ವಶಕ್ಕೆ

ಸ್ಕೂಟಿ ಕಲಿಸಲು ಬಂದ ಮಹಿಳೆಯಿಂದ ಕಳ್ಳತನ ಆರೋಪ -ಕುವೆಂಪುನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ - ನಗದು, ಚಿನ್ನಾಭರಣ ವಶಪಡಿಕೊಂಡ ಪೊಲೀಸರು

gold-and-money-theft-by-women-at-mysore
ಸ್ಕೂಟಿ ಕಲಿಸಲು ಬಂದು ಮನೆಗೆ ಕನ್ನ : ಟ್ರೈನರ್​ ಸೇರಿ ಮೂವರು ಮಹಿಳೆಯರು ವಶಕ್ಕೆ

By

Published : Jan 3, 2023, 5:44 PM IST

ಮೈಸೂರು : ಸ್ಕೂಟಿ ಕಲಿಸಲು ಬಂದ ಮಹಿಳೆ ಸ್ನೇಹಿತೆಯರ ಜೊತೆಗೂಡಿ ಮನೆಗೆ ನುಗ್ಗಿ ನಗದು ಚಿನ್ನಾಭರಣ ಕಳ್ಳತನ ಮಾಡಿರುವ ಆರೋಪದಡಿ ಸಿಕ್ಕಿಬಿದ್ದಿರುವ ಪ್ರಕರಣ ಕುವೆಂಪುನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಬಂಧ ಕುವೆಂಪುನಗರ ನಿವಾಸಿ ಸ್ಕೂಟಿ ಟ್ರೈನರ್ ಅಮೃತಾ (38) ಮತ್ತು ಅವರ ಗೆಳತಿ ಚಾಮುಂಡಿಪುರಂನ ಅಶ್ವಿನಿ ಹಾಗೂ ಮನೆಗೆಲಸದಾಕೆ ಶ್ರುತಿ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ ಸುಮಾರು 7.50 ಲಕ್ಷ ಮೌಲ್ಯದ 160 ಗ್ರಾಂ ಚಿನ್ನಾಭರಣ, 12000 ರೂಪಾಯಿ ನಗದು, ಕೃತ್ಯಕ್ಕೆ ಬಳಸಲಾಗಿದ್ದ ಸ್ಕೂಟರ್ ಹಾಗೂ ಮೂರು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ಪೂರ್ಣಿಮಾ ಎಂಬವರು ರಾಮಕೃಷ್ಣ ನಗರ ಎ ಅಂಡ್ ಬಿ ಬ್ಲಾಕ್ ನಲ್ಲಿ ಒಬ್ಬರೇ ವಾಸವಿದ್ದರು. ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ತಮ್ಮ ಪುತ್ರಿಯ ವಿವಾಹಕ್ಕಾಗಿ ಚಿನ್ನಾಭರಣ ಮಾಡಿಸಿ ಮನೆಯಲ್ಲಿಟ್ಟಿದ್ದರು. ಈ ನಡುವೆ ಸ್ಕೂಟಿ ಓಡಿಸುವುದನ್ನು ಕಲಿಯಲು ಟ್ರೈನರ್ ಅಮೃತಾ ಅವರೊಂದಿಗೆ ಎಂದಿನಂತೆ ಡಿ.31 ರಂದು ಹೋಗಿದ್ದರು. ಬಳಿಕ ಮನೆಗೆ ಬಂದು ನೋಡಿದಾಗ ಬೀರುವಿನಲ್ಲಿದ್ದ ಚಿನ್ನ ಹಾಗೂ ನಗದು ಕಳ್ಳತನವಾಗಿತ್ತು. ಈ ಬಗ್ಗೆ ಪೂರ್ಣಿಮಾ ಕುವೆಂಪು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು, ಸ್ಕೂಟಿ ಟ್ರೈನರ್ ಅಮೃತಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮನೆಯ ನಕಲಿ ಕೀ ಮಾಡಿಸಿಕೊಂಡು ಗೆಳತಿಯರಾದ ಬ್ಯುಟಿಶಿಯನ್ ಅಶ್ವಿನಿ ಹಾಗೂ ಮನೆ ಕೆಲಸ ಮಾಡಿಕೊಂಡಿದ್ದ ಶ್ರುತಿ ಜೊತೆಗೂಡಿ ಚಿನ್ನಾಭರಣ ಹಾಗೂ ಹಣ ದೋಚಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೂರ್ಣಿಮಾ ಅವರು ಚಿನ್ನಾಭರಣಗಳನ್ನು ತಂದಿರುವುದನ್ನು ತಿಳಿದು, ನಕಲಿ ಕೀ ಮೂಲಕ ಮನೆಯೊಳಗೆ ನುಗ್ಗಿ ಕಳ್ಳತನ ಮಾಡಿದ್ದಾರೆ ಎಂದು ಕುವೆಂಪು ನಗರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :ವೈಕುಂಠ ಏಕಾದಶಿ ದಿನವೇ ದೇವಾಲಯದ ಬೀಗ ಕತ್ತರಿಸಿ ಹುಂಡಿ ಹಣ ಕದ್ದ ಕಳ್ಳರು

ABOUT THE AUTHOR

...view details