ಮೈಸೂರು :ಕೊರೊನಾ ಸೋಂಕು ದೃಢಪಟ್ಟ ರೋಗಿಗಳನ್ನು ಜನಸಾಮಾನ್ಯರು ನೋಡುವ ದೃಷ್ಟಿಕೋನವೇ ಬೇರೆಯಾಗಿದೆ. ಸೋಂಕಿತರು ಮೃತಪಟ್ಟರೇ ಅಂತ್ಯ ಸಂಸ್ಕಾರಕ್ಕೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ. ಇಂತಹ ಮೃತದೇಹಗಳಿಗೆ ಅಂತ್ಯ ಸಂಸ್ಕಾರ ಮಾಡುವುದು ಇವರ ಕಾಯಕವಾಗಿದೆ.
ಸೋಂಕಿತರ ಅಂತ್ಯಕ್ರಿಯೆ ನೆರವೇರಿಸುವ ಬಾಡಿಮಿಯಾ ಸುಮಾರು 200ಕ್ಕೂ ಹೆಚ್ಚು ಸೋಂಕಿತ ಮೃತ ದೇಹಗಳ ಅಂತ್ಯಕ್ರಿಯೆ ನೆರವೇರಿಸಿರುವವರು ಅಯೂಬ್ ಬಾಡಿಮಿಯಾ. ಕೊರೊನಾ ರೌದ್ರಾವತಾರಕ್ಕೆ ಪ್ರಪಂಚ ತಲ್ಲಣಿಸಿದೆ. ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಲೋಕ ಹಗಲಿರುಳು ಶ್ರಮಿಸುತ್ತಿದೆ.
ಇತ್ತ ಮೃತರ ಅಂತ್ಯಕ್ರಿಯೆ ನಡೆಸುವುದೇ ದೊಡ್ಡ ಸವಾಲಿನ ಕೆಲಸ. ಮೈಸೂರು ಉದಯಗಿರಿ ನಿವಾಸಿ ಅಯೂಬ್ ಬಾಡಿಮಿಯಾ ಅವರು, ಕೊರೊನಾ ಸೋಂಕಿನಿಂದ ಮೃತಪಟ್ಟ 200ಕ್ಕೂ ಹೆಚ್ಚು ಮಂದಿಯ ಮೃತದೇಹಗಳಿಗೆ ಮುಕ್ತಿ ತೋರುವ ಮೂಲಕ ಮಾನವೀಯ ನೆಲಗಟ್ಟನ್ನು ಎತ್ತಿ ಹಿಡಿದಿದ್ದಾರೆ. ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಮೃತದೇಹಗಳನ್ನು ನಿರ್ಭೀತಿಯಿಂದ ಅಂತ್ಯಕ್ರಿಯೆ ನೆರವೇರಿಸುತ್ತಾರೆ.
ಈ ಮೂಲಕ ಉಚಿತ ಸೇವೆ ಒದಗಿಸಲು ಜೀವನವೇ ಮುಡುಪಾಗಿಟ್ಟಿದ್ದಾರೆ. ಕೊರೊನಾ ಬಂದ್ರೇ ಹೆದರುವ ಜನರ ಮಧ್ಯೆ ಹೃದಯವಂತಿಕೆ ತೋರಿಸುತ್ತಿದ್ದಾರೆ. ಕೊರೊನಾ ಬಂದಾಗಿನಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ಅಯೂಬ್, ಕಳೆದ 21 ವರ್ಷಗಳಿಂದ ಅನಾಥ ಶವಗಳಿಗೆ ಮುಕ್ತಿ ದೊರೆಕಿಸಿದ್ದಾರೆ. ಇದೀಗ ಕೊರೊನಾ ಭೀತಿಯನ್ನೂ ಲೆಕ್ಕಿಸದೇ ಮೃತದೇಹಗಳನ್ನು ರುದ್ರಭೂಮಿಗೆ ಸಾಗಿಸಿ, ಅಂತ್ಯಕ್ರಿಯೆ ಮಾಡಿದ್ದಾರೆ.
ಕೊರೊನಾ ಮೃತದೇಹಗಳ ಅಂತ್ಯಕ್ರಿಯೆ ಸೇವೆಯಿಂದ ನೆಂಟರ ಮನೆಗೆ ಹೋಗಲು ಆಗಿಲ್ಲ. ಅಲ್ಲದೇ, ತಂದೆಯ ಮುಖ ನೋಡಿ 4 ತಿಂಗಳಾಗಿದೆ. ಮುನ್ನೆಚ್ಚರಿಕೆಯ ಎಲ್ಲ ಕ್ರಮಗಳನ್ನು ಅನುಸರಿಸಿ, ಸೇವೆ ಸಲ್ಲಿಸುತ್ತಿದ್ದಾರೆ. ಕೊರೊನಾ ಹೆಸರಲ್ಲಿ ಲೂಟಿ ಹೊಡೆಯುತ್ತಿರುವ ಜನಗಳ ಮಧ್ಯೆ, ಮಾನವೀಯ ಮೌಲ್ಯದ ನೆಲಗಟ್ಟಿನಲ್ಲಿ ಇವರ ಕಾರ್ಯ ಶ್ಲಾಘಿಸುವಂತಹುದಾಗಿದೆ.