ಮೈಸೂರು:ಹಾಡಹಗಲೇ ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ ಜನರನ್ನು ಅಟ್ಟಾಡಿಸಿ, ದಾಂಧಲೆ ನಡೆಸಿದ ಘಟನೆ ವೀರನಹೊಸಳ್ಳಿಯ ಬಳಿಯ ನಾಗಪುರ ಹಾಡಿಯಲ್ಲಿ ಭಾನುವಾರ ನಡೆದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವೀರನಹೊಸಳ್ಳಿ ಬಳಿಯ ನಾಗಪುರಕ್ಕೆ ಹಾಡುಹಗಲೇ ಒಂಟಿ ಸಲಗ ನುಗ್ಗಿ ದಾಂಧಲೆ ನಡೆಸಿದ್ದು, ಇದರ ದಾಂಧಲೆಗೆ ರಾಗಿ, ಜೋಳ, ಬಾಳೆ ಸೇರಿದಂತೆ ಇತರ ಬೆಳೆಗಳು ಹಾನಿಯಾಗಿವೆ.
ಹಾಡಿಗೆ ನುಗ್ಗಿ ಜನರನ್ನು ಅಟ್ಟಾಡಿಸಿದ ಒಂಟಿ ಸಲಗ ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗವನ್ನು ಬೆಂಕಿ ಹಿಡಿದು, ಬೆದರಿಸಲು ಯುವಕರು ಮುಂದಾದಾಗ ಅವರ ಮೇಲೆ ದಾಳಿಗೆ ಮುಂದಾದ ಒಂಟಿ ಸಲಗ ರೋಷದಿಂದ ತಂತಿಬೇಲಿಯನ್ನೇ ತನ್ನ ದಂತದಿಂದ ಕಿತ್ತು ಹಾಕಿದೆ. ನಂತರ ಗುರುಪುರದ ಮುಖ್ಯರಸ್ತೆಗೆ ಬಂದು ಜನರನ್ನು ಅಟ್ಟಾಡಿಸಿದೆ. ಅಲ್ಲಿಂದ ಮುನ್ನುಗ್ಗಿ ಬಂದು ವಿದ್ಯುತ್ ಕಂಬವನ್ನು ಕೆಡವಿ ಹಾಕಿದೆ. ಈ ವೇಳೆ ಆನೆ ಅಪಾಯದಿಂದ ಪಾರಾಗಿದೆ.
ಕಳೆದ ಕೆಲವು ದಿನಗಳಿಂದ ರಾತ್ರಿ ಮತ್ತು ಹಗಲು ಎನ್ನದೇ ವೀರನಹೊಸಳ್ಳಿ ಅರಣ್ಯವಲಯದಿಂದ ಬರುವ ಈ ಒಂಟಿ ಸಲಗ ಹಲವು ಕಡೆ ದಾಂಧಲೆ ಜೊತೆಗೆ, ಹಸುಗಳನ್ನು ಕೊಂದು ಹಾಕಿದೆ. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ, ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಕೂಡಲೇ ಅಪಾಯ ಸಂಭವಿಸುವ ಮುನ್ನ ಒಂಟಿ ಸಲಗವನ್ನು ಸೆರೆಹಿಡಿಯಬೇಕೆಂದು ಜನರು ಆಗ್ರಹಿಸಿದ್ದಾರೆ.