ಮೈಸೂರು:ದೂರು ನೀಡಲು ಬಂದ ವ್ಯಕ್ತಿ ಹಾಗೂ ಆತನ ಇಬ್ಬರು ಹೆಣ್ಣು ಮಕ್ಕಳಿಗೆ ಕುಡಿದ ಮತ್ತಿನಲ್ಲಿದ್ದ ಎನ್ನಲಾದ ಪೇದೆ ಅವಾಚ್ಯವಾಗಿ ನಿಂದಿಸಿದ್ದಾನೆ ಎಂಬ ಆರೋಪ ಪ್ರಕರಣ ಹೆಚ್.ಡಿ. ಕೋಟೆ ತಾಲೂಕಿನಲ್ಲಿ ನಡೆದಿದೆ.
ದೂರು ನೀಡಲು ಬಂದ ಯುವತಿಯರಿಗೆ ಪೇದೆಯಿಂದ ನಿಂದನೆ, ಧಮ್ಕಿ ಆರೋಪ! - ಅವಾಚ್ಯ
ತಂದೆ ಹಾಗೂ ಇಬ್ಬರು ಪುತ್ರಿಯರು ದೂರು ನೀಡಲು ಹೋದಾಗ, ಅಂತರಸಂತೆ ಉಪಠಾಣೆಯಲ್ಲಿ ಪಾನಮತ್ತನಾಗಿದ್ದ ಎನ್ನಲಾದ ಪೇದೆ ಶ್ರೀನಿವಾಸ್, ಸಾರಿಗೆ ಬಸ್ ಚಾಲಕನ ವಿರುದ್ಧ ದೂರು ನೀಡದಂತೆ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ.
ತಾಲೂಕಿನ ಅಂತರಸಂತೆ ಬಳಿ ಕಾರಿಗೆ ಸಾರಿಗೆ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಇದರ ವಿರುದ್ಧ ತಂದೆ ಹಾಗೂ ಇಬ್ಬರು ಪುತ್ರಿಯರು ದೂರು ನೀಡಲು ಹೋದಾಗ, ಅಂತರಸಂತೆ ಉಪಠಾಣೆಯಲ್ಲಿದ್ದ ಪೇದೆ ಶ್ರೀನಿವಾಸ್, ಸಾರಿಗೆ ಬಸ್ ಚಾಲಕನ ವಿರುದ್ಧ ದೂರು ನೀಡದಂತೆ ಧಮ್ಕಿ ಹಾಕಿ ನಿಂದಿಸಿದ್ದಾನೆ ಎನ್ನಲಾಗ್ತಿದೆ.
ಇದರಿಂದ ಬೇಸರಗೊಂಡ ವ್ಯಕ್ತಿ ದೂರು ಸ್ವೀಕರಿಸುವಂತೆ ಮನವಿ ಮಾಡಿದಾಗ, ಕೆಂಡಾಮಂಡಲವಾದ ಪೇದೆಯು ಆ ವ್ಯಕ್ತಿ ಹಾಗೂ ಆತನ ಇಬ್ಬರು ಹೆಣ್ಣು ಮಕ್ಕಳ ಜೊತೆ ಅಶ್ಲೀಲವಾಗಿ ಮಾತನಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಯುವತಿಯರು ಸಹ ಪೇದೆಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಪೇದೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.