ಕರ್ನಾಟಕ

karnataka

By ETV Bharat Karnataka Team

Published : Aug 29, 2023, 7:17 PM IST

ETV Bharat / state

ಮನುಷ್ಯನ ಪ್ರಾಣ ಉಳಿಸಲು ವೈದ್ಯರು ಎಲ್ಲಾ ರೀತಿಯ ಪ್ರಯತ್ನ ಮಾಡಬೇಕು: ಸಿಎಂ ಸಿದ್ದರಾಮಯ್ಯ

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಮ್ಮಿಕೊಂಡಿದ್ದ ಶತಮಾನೋತ್ಸವ ಸಮಾರಂಭವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ

ಮೈಸೂರು :ಮನುಷ್ಯನ ಪ್ರಾಣ ಅಮೂಲ್ಯವಾದದ್ದು. ವೈದ್ಯರು ಪ್ರಾಣ ಉಳಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಬೇಕು. ಆಗ ವೃತ್ತಿ ಗೌರವವನ್ನು ಉಳಿಸಿದಂತೆ ಆಗುತ್ತದೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ತಿಳಿಸಿದರು.

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಇಲ್ಲಿ ಹಮ್ಮಿಕೊಂಡಿದ್ದ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಲೋಗೋ ಅನಾವರಣಗೊಳಿಸಿ ಅವರು ಮಾತನಾಡಿದರು. ಕೆ. ಆರ್ ಆಸ್ಪತ್ರೆ ಆವರಣದಲ್ಲಿ ಎಂಆರ್​ಐ ಘಟಕವನ್ನು ಹಾಗೂ ನವೀಕರಣಗೊಂಡ ಸುಟ್ಟ ಗಾಯಗಳ ಘಟಕವನ್ನು ಉದ್ಘಾಟಿಸಲಾಗಿದೆ. ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಗೆ 100 ವರ್ಷ ತುಂಬಿರುವುದು ಸಂತೋಷದ ವಿಷಯ. ನನಗೂ ಮೆಡಿಕಲ್ ಓದುವ ಆಸೆ ಇತ್ತು. ಆದರೆ, ನನಗೆ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಸಿಗಲಿಲ್ಲ. ಆಗ ನನಗೆ ಮೆಡಿಕಲ್ ಪ್ರವೇಶ ಸಿಕ್ಕಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಾ ಇರಲಿಲ್ಲ ಅನ್ನಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಮ್ಮಿಕೊಂಡಿದ್ದ ಶತಮಾನೋತ್ಸವ ಸಮಾರಂಭ

ವೈದ್ಯ ವೃತ್ತಿ ಶ್ರೇಷ್ಠವಾದದ್ದು: ನಾವು ಯಾವುದೇ ಕೆಲಸದಲ್ಲಿ ನಿಷ್ಠೆಯಿಂದ, ಬದ್ಧತೆಯಿಂದ ಕಾರ್ಯ ನಿರ್ವಹಿಸಿದರೆ ಮೇಲೆ ಬರಲು ಸಾಧ್ಯ. ವೃತ್ತಿ ಗೌರವವನ್ನು ಕಾಪಾಡಿಕೊಳ್ಳಬೇಕು. ಆ ವೃತ್ತಿಯನ್ನು ಗೌರವಿಸಿ, ಪ್ರೀತಿಸಬೇಕು. ಆಗ ಜನ ಮನ್ನಣೆ ಗಳಿಸಲು ಸಾಧ್ಯ. ವೈದ್ಯ ವೃತ್ತಿ ಶ್ರೇಷ್ಠವಾದದ್ದು ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಂದಿನ ಮೈಸೂರು ರಾಜ್ಯಕ್ಕೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು. ಅವರೇ ಮೆಡಿಕಲ್ ಕಾಲೇಜನ್ನು 1924 ರಲ್ಲಿ ಪ್ರಾರಂಭ ಮಾಡಿದರು. ಅದಕ್ಕೂ ಮೊದಲು ಡಾಕ್ಟರ್ ಓದಲು ಮದ್ರಾಸ್​ಗೆ ಹೋಗಬೇಕಿತ್ತು. ಇಲ್ಲಿ ಅಧ್ಯಯನ ಮಾಡಿದವರು ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೆಡಿಕಲ್ ಕಾಲೇಜಿನ ಶತಮಾನೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ಆಚರಣೆ ಮಾಡೋಣ, ಇದಕ್ಕೆ ಅಗತ್ಯವಾದ ಅನುದಾನ ನೀಡಲಾಗುವುದು ಎಂದು ಸಿಎಂ ಭರವಸೆ ನೀಡಿದ್ರು.

ಶತಮಾನೋತ್ಸವ ಸಮಾರಂಭ

ನನ್ನ ಅವಧಿಯಲ್ಲಿ 300 ಹಾಸಿಗೆಗಳ ಜಿಲ್ಲಾ ಆಸ್ಪತ್ರೆಯನ್ನು ಪ್ರಾರಂಭ ಮಾಡಲಾಯಿತು. ಜಯದೇವ ಆಸ್ಪತ್ರೆಯನ್ನು ಆರಂಭಿಸಲಾಯಿತು. ಮೈಸೂರು ಆಸ್ಪತ್ರೆಗಳಿಗೆ ಕೊಡಗು, ಹಾಸನ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಂದ ಜನರು ಚಿಕಿತ್ಸೆಗೆ ಬರುತ್ತಾರೆ. ವೈದ್ಯರು ಶ್ರದ್ಧೆಯಿಂದ ಕಾಯಿಲೆಯನ್ನು ಅಧ್ಯಯನ ಮಾಡಿ, ಚಿಕಿತ್ಸೆ ನೀಡಬೇಕು ಎಂದು ಕಿವಿಮಾತು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪ ಅವರು ಮಾತನಾಡಿ, 20 ಹಾಸಿಗೆಯಲ್ಲಿ ಆರಂಭವಾದ ಆಸ್ಪತ್ರೆ ಇಂದು 1100 ಹಾಸಿಗೆಗಳ ಆಸ್ಪತ್ರೆಯಾಗಿ ಕೆ. ಆರ್ ಆಸ್ಪತ್ರೆ ಅಭಿವೃದ್ಧಿ ಆಗಿದೆ. ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯ ಇಲ್ಲಿ ದೊರೆಯುತ್ತಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ಔಷಧಿಗೆ ಚೀಟಿ ಬರೆಯದೆ ಅಲ್ಲಿಯೇ ನೀಡಬೇಕು. ವೈದ್ಯರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಸೇವೆ ಮಾಡಬೇಕು. ವೈದ್ಯರು ಅನೇಕ ಆಡಳಿತ ಸೇವೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.

ವಿಧಾನ ಪರಿಷತ್​ನ ಸದಸ್ಯರಾದ ಡಾ. ಡಿ. ತಿಮ್ಮಯ್ಯ ಅವರು ಮಾತನಾಡಿ, 1964ರಲ್ಲಿ ನಾನು ಈ ಕಾಲೇಜಿನಲ್ಲಿ ಎಂಬಿಬಿಎಸ್ ಅಧ್ಯಯನಕ್ಕೆ ಸೇರಿ 1970ರಲ್ಲಿ ಅಧ್ಯಯನ ಮುಗಿಸಿದೆ. ನನ್ನ ಅಧ್ಯಯನಕ್ಕೆ ಮಾಜಿ ಮುಖ್ಯಮಂತ್ರಿಗಳಾದ ದೇವರಾಜ್ ಅರಸು ಅವರು ಸಹಾಯ ಮಾಡಿದರು. ಅಧ್ಯಯನ ಮುಗಿದ ನಂತರ ಮೆಡಿಕಲ್ ಆಫೀಸರ್ ಆಗಿ ನೇಮಕ ಮಾಡಿದರು. ನನ್ನ 40ನೇ ವಯಸ್ಸಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಆಗಿ ನೇಮಕವಾದೆ. ಆಗ ಮೈಸೂರು ಜಿಲ್ಲೆ ಆರೋಗ್ಯ ಸೇವೆಯಲ್ಲಿ 8 ಸ್ಥಾನದಲ್ಲಿ ಇತ್ತು. ತಮ್ಮ ಬಳಿ ಬರುವ ರೋಗಿಗಳಿಗೆ ತಮ್ಮ ಸಂಬಂಧಿಕರು ಎಂದು ತಿಳಿದು ಚಿಕಿತ್ಸೆ ನೀಡಿ ಎಂದು ವೈದ್ಯರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ಹರೀಶ್ ಗೌಡ ಅವರು ಮಾತನಾಡಿ, ಮಹಾರಾಜರು ವೈದ್ಯಕೀಯ ಕಾಲೇಜು, ಕೆ ಆರ್ ಆಸ್ಪತ್ರೆ ನೀಡಿದರು. ಸಿದ್ದರಾಮಯ್ಯ ಅವರು ಇವುಗಳ ಅಭಿವೃದ್ಧಿಗೆ ಅನುದಾನ ನೀಡಿದರು. ಮಾನ್ಯ ಮುಖ್ಯಮಂತ್ರಿಗಳು ಹಸಿದವರಿಗೆ ಅನ್ನಭಾಗ್ಯ ನೀಡಿದರು. ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಮೈಸೂರು ಜಿಲ್ಲೆಗೆ ನೆಫ್ರಾಲಾಜಿ ಸೆಂಟರ್ ಹಾಗೂ ಕಿದ್ವಾಯಿ ಆಸ್ಪತ್ರೆ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ, ಡಿ ರವಿಶಂಕರ್, ಅನಿಲ್ ಕುಮಾರ್ ಸಿ, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಕೆಡಿಪಿ ನಾಮ ನಿರ್ದೇಶಿತ ಸದಸ್ಯರಾದ ಯತಿಂದ್ರ ಸಿದ್ದರಾಮಯ್ಯ, ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ, ಮೈಸೂರು ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಿ, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಸುಜಾತ ರಾಥೋಡ್, ವೈದ್ಯಕೀಯ ಕಾಲೇಜಿನ ಡೀನ್ ದ್ರಾಕ್ಷಾಯಿನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ವೈಜ್ಞಾನಿಕ-ವೈಚಾರಿಕ ಶಿಕ್ಷಣ ಸಿಗದೇ ಹೋದರೆ ಸಮಾಜಕ್ಕೆ ಜಡತ್ವ ಹಿಡಿಯುತ್ತದೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ABOUT THE AUTHOR

...view details