ಮೈಸೂರು: ಮುಖ್ಯಮಂತ್ರಿ ಯಡಿಯೂರಪ್ಪ ಒಳ್ಳೆ ಆಡಳಿತಗಾರ ಅಲ್ಲ, ಒಳ್ಳೆಯ ಸಂಘಟನಾಕಾರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಮೈಸೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರದ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಕಿಡಿ.. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ಸೋತಿವೆ ಎಂದು ಅಸಮಾಧಾನ ಹೊರ ಹಾಕಿದರು.
ರಾಜ್ಯದಲ್ಲಿ ಕೋವಿಡ್ ಸೋಂಕಿತರಿಗೆ ಬೆಡ್, ಆಕ್ಸಿಜನ್, ವೆಂಟಿಲೇಟರ್ ಸಿಗುತ್ತಿಲ್ಲ. ಕೊರೊನಾ ಲಸಿಕೆಯನ್ನು ತ್ವರಿತ ಹಾಗೂ ಉಚಿತವಾಗಿ ಕೊಡಬೇಕು. ಕಳೆದ ವರ್ಷದ ಕೋವಿಡ್ನಿಂದ ರಾಜ್ಯ ಇನ್ನೂ ಸಹ ಪಾಠವನ್ನು ಕಲಿತಿಲ್ಲ.
ಕೋವಿಡ್ ಎರಡನೇ ಅಲೆ ಭೀಕರವಾಗಿದೆ. ಆದ್ರೆ, ಬಿಜೆಪಿಯವರಿಗೆ ಜನರಿಗಿಂತ ಅಧಿಕಾರ ಮುಖ್ಯವಾಗಿದೆ. ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಅದಕ್ಕೆ ಕಡಿಮೆ ಬೆಲೆಯಲ್ಲಿ ಜಿಂದಾಲ್ ಕಂಪನಿಗೆ ಭೂಮಿಯನ್ನು ಕೊಟ್ಟಿರುವುದು, ಇದು ಭ್ರಷ್ಟಾಚಾರದ ಸಂಕೇತ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಬಳ್ಳಾರಿ ಮಹಾನಗರ ಪಾಲಿಕೆ 'ಕೈ'ವಶ: ಬಿಜೆಪಿಗೆ ಮುಖಭಂಗ
ರಾಜ್ಯ ಸರ್ಕಾರದಲ್ಲಿ ಸಚಿವರು ಹಾಗೂ ಸಿಎಂ ನಡುವೆ ಸಮನ್ವಯ ಇಲ್ಲ. ಯಡಿಯೂರಪ್ಪ ಒಳ್ಳೆಯ ಆಡಳಿತಗಾರ ಅಲ್ಲ, ಒಳ್ಳೆಯ ಸಂಘಟನಾಗಾರ ಅಷ್ಟೇ ಎಂದಿದ್ದಾರೆ. ನಿನ್ನೆ ಸರ್ಕಾರಿ ಅಧಿಕಾರಿಗಳ ಸಭೆಯಲ್ಲಿ ಪುತ್ರ ವಿಜಯೇಂದ್ರ ಭಾಗವಹಿಸಿದ್ದು, ಕಾನೂನಿಗೆ ವಿರೋಧ. ಮುಖ್ಯ ಮಂತ್ರಿಗಳ ಕುಟುಂಬ ಅಧಿಕಾರ ದುರುಪಯೋಗ ಪಡಿಸಿಕೊಂಡತೆ ಆಗುತ್ತಿದೆ, ಇದೊಂದು ಗುಲಾಮಗಿರಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.