ಮೈಸೂರು:ವಿದ್ಯಾವಂತ ಮತ್ತು ಒಕ್ಕಲಿಗರಿಂದ ಕೂಡಿರುವ ಚಾಮರಾಜ ಕ್ಷೇತ್ರದಲ್ಲಿ ಮೂರು (ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್) ಪಕ್ಷಗಳು ಸಮಾನ ಬಲಾಬಲ ಹೊಂದಿವೆ. ಕ್ಷೇತ್ರದಲ್ಲಿ ಇಲ್ಲಿಯವರೆಗೆ ಬಿಜೆಪಿ ಅತಿ ಹೆಚ್ಚು ಬಾರಿ ಗೆಲುವು ಸಾಧಿಸಿದ್ದರಿಂದ ಉಳಿದ ಪಕ್ಷಗಳಿಗಿಂತ ಸ್ವಲ್ಪ ಹಿಡಿತ ಸಾಧಿಸಿರುವುದು ಸುಳ್ಳಲ್ಲ. ಆದರೆ, ಈ ಬಾರಿ ಮೂರು ಪಕ್ಷಗಳ ನಡುವೆ ನೇರ ಪೈಪೋಟಿ ಏರ್ಪಟ್ಟಿದ್ದರಿಂದ ರಾಜಕೀಯ ಲೆಕ್ಕಾಚಾರ ತುಸು ಹೆಚ್ಚಾಗಿದೆ. ಈವರೆಗೆ ಯಾವ ಪಕ್ಷದಿಂದಲೂ ಅಭ್ಯರ್ಥಿಗಳು ಘೋಷಣೆಯಾಗಿಲ್ಲ. ಆದರೂ, ಈ ಕ್ಷೇತ್ರದಲ್ಲಿ ಈಗಾಗಲೇ ಹಾಲಿ ಶಾಸಕ ಹಾಗೂ ಇತರ ಸಂಭಾವ್ಯ ಅಭ್ಯರ್ಥಿಗಳು ಪ್ರಚಾರ ಆರಂಭಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಯಾವ ಪಕ್ಷಕ್ಕೆ ಜೈ ಅನ್ನುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಸುಶಿಕ್ಷಿತರ ಕ್ಷೇತ್ರ ಎಂಬ ಖ್ಯಾತಿ ಗಳಿಸಿದ್ದರೂ ಒಕ್ಕಲಿಗರ ಪ್ರಾಬಲ್ಯ ಹೆಚ್ಚಿರುವ ಕ್ಷೇತ್ರದಲ್ಲಿ, ಚುನಾವಣಾ ರಣರಂಗಕ್ಕೂ ಮುನ್ನವೇ ಮುಸುಕಿನ ಗುದ್ದಾಟದಿಂದ ತೀವ್ರ ಕೂತೂಹಲ ಕೆರಳಿಸಿದೆ. ಹಾಲಿ ಬಿಜೆಪಿ ಶಾಸಕರಾದಿಯಾಗಿ, ಕೈ ಹಾಗೂ ದಳದಿಂದಲೂ ಸಮಬಲದ ಹೋರಾಟಕ್ಕೆ ಸಿದ್ಧತೆ ನಡೆದಿದೆ. ಕ್ಷೇತ್ರದಲ್ಲಿ ಇದುವರೆಗೆ ಸ್ಪರ್ಧಿಸಿರುವವರೆಲ್ಲಾ ಬಹುತೇಕ ಒಕ್ಕಲಿಗರೇ ಆಗಿದ್ದು, ಶಾಸಕರಾಗಿ ಆಯ್ಕೆ ಆದವರೆಲ್ಲರೂ ಒಕ್ಕಲಿಗರೇ ಆಗಿದ್ದಾರೆ. ಹಾಗಾಗಿ, ಈ ಬಾರಿಯೂ ಪ್ರಮುಖ ಮೂರೂ ರಾಜಕೀಯ ಪಕ್ಷಗಳು ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳಿಗೆ ಮಣೆ ಹಾಕಲು ಮುಂದಾಗಿವೆ.
1978ರಿಂದ ಇಲ್ಲಿಯವರೆಗೆ ಕ್ಷೇತ್ರದಲ್ಲಿ ಒಟ್ಟು 11 ಚುನಾವಣೆಗಳು ನಡೆದಿದ್ದು, ಹಲವು ಶಾಸಕರು ಆರಿಸಿ ಬಂದಿದ್ದಾರೆ. ಈ ಪೈಕಿ ಶಂಕರಲಿಂಗೇಗೌಡ ಸತತ 4 ಬಾರಿ ಆಯ್ಕೆಯಾಗಿ ದಾಖಲೆ ಬರೆದರೂ ಸಹ ಕ್ಷೇತ್ರಕ್ಕೆ ಮಂತ್ರಿಗಿರಿ ದೊರಕದಿರುವುದು ವಿಪರ್ಯಾಸ. ಒಕ್ಕಲಿಗರು ಮಾತ್ರವಲ್ಲದೆ ಬ್ರಾಹ್ಮಣ, ಲಿಂಗಾಯತ, ಗೊಲ್ಲ ಸೇರಿ ಅನೇಕ ಹಿಂದುಳಿದ ಸಮುದಾಯದವರು ಕ್ಷೇತ್ರದಲ್ಲಿದ್ದಾರೆ. ಬಹು ಮಹಡಿ ಅಪಾರ್ಟ್‌ಮೆಂಟ್‌ನ ಮತದಾರರ ಸಂಖ್ಯೆ ಕಡಿಮೆ. ಸ್ಲಂಗಳಲ್ಲೇ (13ಕ್ಕೂ ಹೆಚ್ಚು) ಅತಿ ಹೆಚ್ಚು ಮತದಾರ ಇರುವುದರಿಂದ ನಾಯಕರ ಚಿತ್ತ ಸಹಜವಾಗಿ ಸ್ಲಂಗಳತ್ತ ಹರಿದಿದೆ.
ಕೈನಲ್ಲಿ ಟಿಕೆಟ್ಗಾಗಿ ಪೈಪೋಟಿ: ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗೆ ಮಾಜಿ ಶಾಸಕ ವಾಸು ಹಾಗೂ ಮುಖಂಡ ಕೆ.ಹರೀಶ್‌ಗೌಡ ನಡುವೆ ಸದ್ಯ ಪೈಪೋಟಿ ಏರ್ಪಟ್ಟಿದೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಆಪ್ತರು ಎಂಬ ಕಾರಣಕ್ಕೆ ಟಿಕೆಟ್ ವಿಷಯಲ್ಲಿ ವಾಸು ಮುನ್ನೆಲೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ನಾಲ್ಕು ಬಾರಿ ಸ್ಪರ್ಧಿಸಿ ಒಮ್ಮೆ ಗೆದ್ದಿರುವ ವಾಸು ಈ ಹಿಂದೆ ಮೇಯರ್ ಆಗಿ, ವೀರಪ್ಪ ಮೊಯ್ಲಿ ಮುಖ್ಯ ಮಂತ್ರಿಯಾಗಿದ್ದಾಗ ಅವರ ರಾಜಕೀಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. 2023ರ ಚುನಾವಣೆಗೂ ಅವರೇ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜಿಲ್ಲೆಯಲ್ಲೇ ತಮ್ಮದೆ ಆದ ಅಭಿಮಾನಿ ಬಳಗ ಹೊಂದಿರುವ ವಾಸು ಜಿಲ್ಲೆಯ ಸಜ್ಜನ ರಾಜಕಾರಣಿಗಳಲ್ಲಿ ಅವರೂ ಒಬ್ಬರೆನಿಸಿದ್ದಾರೆ. ಇದೇ ಕಾರಣಕ್ಕೆ ಬಹುತೇಕ ಇವರಿಗೆ ಟಿಕೆಟ್ ನೀಡುವುದು ಖಚಿತ ಎನ್ನಲಾಗುತ್ತಿದೆ.
ಮಾಜಿ ಸಿಎಂ ನಂಬಿರುವ ಹರೀಶ್ ಗೌಡ:ಸಿದ್ದರಾಮಯ್ಯನವರ ಆಪ್ತರಲ್ಲಿ ಗುರುತಿಸಿಕೊಂಡಿರುವ ಕೆ.ಹರೀಶ್‌ಗೌಡ ಕೂಡ ಕ್ಷೇತ್ರದ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದು, ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಕ್ಷೇತ್ರದಲ್ಲಿ ಸತತ 12 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಆರಂಭದಲ್ಲಿ ಜೆಡಿಎಸ್‌ನಲ್ಲಿದ್ದ ಹರೀಶ್ ಗೌಡ, ಹೆಚ್.ಡಿ. ರೇವಣ್ಣ ಅವರ ಶಿಷ್ಯರಾಗಿದ್ದರು. 2013 ಹಾಗೂ 2018ರ ಚುನಾವಣೆಗಳಲ್ಲೂ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ 2013ರಲ್ಲಿ ಜೆಡಿಎಸ್ನಿಂದ ಹೆಚ್.ಎಸ್. ಶಂಕರಲಿಂಗೇಗೌಡರಿಗೆ ಟಿಕೆಟ್ ನೀಡಿ, ಮುಂದಿನ ಚುನಾವಣೆಗೆ ಟಿಕೆಟ್ ನೀಡುವುದಾಗಿ ಹರೀಶ್ ಗೌಡರನ್ನು ದಳಪತಿಗಳು ಸಮಾಧಾನ ಮಾಡಿದ್ದರು.
ಆದರೆ, 2018ರಲ್ಲೂ ಹೆಚ್.ಡಿ. ದೇವೇಗೌಡರ ಸಂಬಂಧಿ ಎಂಬ ಕಾರಣಕ್ಕೆ ಪ್ರೊ. ಕೆ.ಎಸ್. ರಂಗಪ್ಪ ಅವರಿಗೆ ಜೆಡಿಎಸ್ ಟಿಕೆಟ್ ನೀಡಲಾಗಿತ್ತು. ಇದರಿಂದ ಕೆರಳಿದ ಕೆ. ಹರೀಶ್ ಗೌಡ, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಳಿಕ ಪಾಲಿಕೆ ಚುನಾವಣೆಯಲ್ಲೂ ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮ ಇಬ್ಬರು ಪಕ್ಷೇತರ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿರುವ ಇವರು, ಈ ಬಾರಿ ಶತಾಯಗತಾಯ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದಾರೆ. ಟಿಕೆಟ್ ಸಿಗುವ ವಿಶ್ವಾಸದಲ್ಲಿಯೂ ಇದ್ದಾರೆ.