ಮೈಸೂರು: ಅಪಘಾತವಾದ ಕಾರಿನಲ್ಲಿ ನನ್ನ ಮಗ ಇರಲಿಲ್ಲ. ಅದಕ್ಕೆ ಎಫ್ಐಆರ್ನಲ್ಲಿ ಆತನ ಹೆಸರು ಉಲ್ಲೇಖವಾಗಿಲ್ಲ ಎಂದು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ್ ಸವದಿ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಇಂದು ತಮ್ಮ ಇಲಾಖೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ ಡಿಸಿಎಂ ಲಕ್ಷ್ಮಣ್ ಸವದಿ ಅವರು, ಮಗನ ಕಾರು ಅಪಘಾತ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಅಪಘಾತವಾದ ಕಾರಿನಲ್ಲಿ ನನ್ನ ಮಗ ಇರಲಿಲ್ಲ. ಆದರೆ, ಅಪಘಾತ, ಅಪಘಾತವೇ. ನನ್ನ ಮಗ ಅಪಘಾತವಾದ ಕಾರಿನಲ್ಲಿದ್ದರೂ ಸಹ ನಾನು ಅವನಿಗೆ ಅಪಘಾತ ಮಾಡು ಅಂತ ಹೇಳುತ್ತಿರಲಿಲ್ಲ. ನನ್ನ ಮಗ ತುರ್ತಾಗಿ ಗಾಯಗೊಂಡವರ ನೆರವಿಗೆ ಧಾವಿಸಿದ್ದಾನೆ. ಆದರೂ ಆತ ಬದುಕಿ ಉಳಿಯಲಿಲ್ಲ.
ತಮ್ಮ ಮಗ ಅಪಘಾತವಾದ ಕಾರಿನಲ್ಲಿರಲಿಲ್ಲ ಅಂತಾರೆ ಡಿಸಿಎಂ ಸವದಿ.. ಇನ್ನು, ಬೈಕ್ ಸವಾರ ಆತುರವಾಗಿ ಯು-ಟರ್ನ್ ತೆಗೆದುಕೊಂಡಿದ್ದು ಅಪಘಾತಕ್ಕೆ ಕಾರಣವಾಗಿದೆ. ನಾನು ಅಪಘಾತವಾದ ಕುಟುಂಬದ ಜೊತೆ ಫೋನ್ನಲ್ಲಿ ಮಾತನಾಡಿಲ್ಲ. 2 ದಿನದ ನಂತರ ಮೃತರ ಮನೆಗೆ ಖುದ್ದಾಗಿ ಭೇಟಿ ನೀಡಿ ಸಾಂತ್ವನ ಹೇಳಿ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೆಲವರು ಮಾತನಾಡುತ್ತಿದ್ದು, ಅದು ಅವರ ವೈಯಕ್ತಿಕ ಅಭಿಪ್ರಾಯ ಅಷ್ಟೇ.. ಆದರೆ, ಹೈಕಮಾಂಡ್ ಹಂತದಲ್ಲಿ ನಾಯಕತ್ವ ಬದಲಾವಣೆ ಪ್ರಸ್ತಾವ ಇಲ್ಲ. ಕೆಲವರು ಅಲ್ಲಿ ಇಲ್ಲಿ ಮಾತನಾಡುತ್ತಿದ್ದಾರೆ.
ವಿಜಯೇಂದ್ರ ದಿನಕ್ಕೆ 100 ಕೋಟಿ ಅವ್ಯವಹಾರ ಮಾಡುತ್ತಿದ್ದಾರೆ ಎಂಬ ಶಾಸಕ ಯತ್ನಾಳ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,ಇದೆಲ್ಲವನ್ನು ಹೈಕಮಾಂಡ್ ಗಮನಿಸುತ್ತಿದೆ ಎಂದರು. ಕೆಎಸ್ಆರ್ಟಿಸಿ ಬಸ್ ದರ ಸದ್ಯಕ್ಕೆ ಏರಿಕೆ ಇಲ್ಲ. ಟಿಕೆಟ್ ದರ ಏರಿಸುವಂತೆ ನಿಗಮಗಳಿಂದ ಬೇಡಿಕೆ ಬಂದಿದೆ. ಸದ್ಯ ಕೊರೊನಾ ಸಂಕಷ್ಟದ ಕಾರಣ ಈಗಷ್ಟೇ ಅನ್ಲಾಕ್ ಆಗಿದೆ.
ಜನರು ಬಸ್ಗಳಲ್ಲಿ ಓಡಾಡಲು ಭಯ ಪಡುತ್ತಿದ್ದಾರೆ. ಟಿಕೆಟ್ ದರ ಏರಿಸಿದರೆ ಮತ್ತಷ್ಟು ಸಮಸ್ಯೆಯಾಗುತ್ತದೆ. ಆದ್ದರಿಂದ ಏರಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ 7 ಬೇಡಿಕೆಗಳನ್ನು ಈಡೇರಿಸಿದ್ದೇವೆ ಮತ್ತು 9ನೇ ಬೇಡಿಕೆ ವೇತನ ಪರಿಷ್ಕರಣೆ ಮಾಡಬೇಕು ಎಂದು ಕೇಳುತ್ತಿದ್ದಾರೆ.
ಆದರೆ, ಲಾಕ್ಡೌನ್ನಿಂದ ನಿಗಮಗಳಿಗೆ 4 ಸಾವಿರ ಕೋಟಿ ನಷ್ಟವಾಗಿದೆ. ಈಗ ಬರುತ್ತಿರುವ ಆದಾಯ ಇಂಧನಕ್ಕೂ ಸಾಲುತ್ತಿಲ್ಲ. ನಿಗಮಗಳಿಗೆ ಆದಾಯ ಬರಲು ಶುರುವಾದ ನಂತರ ವೇತನ ಪರಿಷ್ಕರಣೆ ಚಿಂತನೆ ನಡೆಸಲಾಗುವುದು ಎಂದರು.