ಮೈಸೂರು : 5 ಸಾವಿರ ಕ್ಯೂಸೆಕ್ ನೀರು ಹರಿಯಬೇಕು ಎಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯ ನಿರ್ಧಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಕಾನೂನು ತಜ್ಞರ ಬಳಿ ಚರ್ಚೆ ನಡೆಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ, ಬಿಳಿಗುಂಡ್ಲುವಿಗೆ 5 ಸಾವಿರ ಕ್ಯೂಸೆಕ್ಸ್ ನೀರು ಹರಿಯಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಈ ವಿಚಾರದಲ್ಲಿ ನಾವು ತೀವ್ರವಾಗಿ ಹೋರಾಟ ಮಾಡಿದ್ದೇವೆ. ನಮ್ಮ ತಾಂತ್ರಿಕ ಸಿಬ್ಬಂದಿ ಹಾಗೂ ಸಮಿತಿಯಲ್ಲಿ ಇರುವ ಅಧಿಕಾರಿಗಳು ಕಾವೇರಿ ನೀರಿನ ಪರಿಸ್ಥಿತಿಯನ್ನು ಮನವರಿಕೆ ಮಾಡಿದ್ದಾರೆ. ಈ ವಿಚಾರವಾಗಿ ಕೂಡಲೇ ನಾನು ಹಾಗೂ ಮುಖ್ಯಮಂತ್ರಿಗಳು ಕಾನೂನು ತಜ್ಞರ ಬಳಿ ಚರ್ಚೆ ನಡೆಸುತ್ತೇನೆ ಎಂದರು.
ಆ.31ರ ವರೆಗೆ ನಿತ್ಯ 10 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಹೇಳಿದ್ದಾರೆ. ಕೆಆರ್‌ಎಸ್ ಗರಿಷ್ಠ ಮಟ್ಟ 24 ಟಿಎಂಸಿ ಅದರಲ್ಲಿ 15 ಟಿಎಂಸಿ ಲಭ್ಯವಿದೆ. ಕಬಿನಿ ಗರಿಷ್ಠ ಮಟ್ಟ 13 ಟಿಎಂಸಿಯಲ್ಲಿ 3 ಟಿಎಂಸಿ ಇದೆ. ಹಾರಂಗಿಯಲ್ಲಿ 7.8 ಟಿಎಂಸಿಯಲ್ಲಿ 7 ಟಿಎಂಸಿ ಲಭ್ಯವಿದೆ ಮತ್ತು ಹೇಮಾವತಿಯ ಗರಿಷ್ಠ 25 ಟಿಎಂಸಿಯಲ್ಲಿ 21 ಟಿಎಂಸಿ ಲಭ್ಯವಿದೆ.
ತಮಿಳುನಾಡಿನವರು ಆಕ್ರಮಣಕಾರಿಯಾಗಿ ತಮ್ಮ ವಾದ ಮಂಡಿಸಿದ್ದಾರೆ. ನಮ್ಮ ಅಧಿಕಾರಿಗಳು ಸಹ ಅಷ್ಟೇ ಸಮರ್ಥವಾಗಿ ನಿಭಾಯಿಸಿದ್ದಾರೆ. ಏಕೆಂದರೆ ಅವರು ಕೇಳಿದ್ದು 24 ಸಾವಿರ ಕ್ಯೂಸೆಕ್, ಆಗಸ್ಟ್ ತಿಂಗಳ 28ರ ತನಕ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ನಮಗೆ ಮಳೆ ಬಂದಿಲ್ಲ ಎಂದು ಮನವರಿಕೆ ಮಾಡಿದ ಪರಿಣಾಮ ನೀರು ಹರಿಸುವ ಪ್ರಮಾಣ 5 ಸಾವಿರ ಕ್ಯೂಸೆಕ್ಗೆ ಇಳಿದಿದೆ.