ಮೈಸೂರು: ದಲಿತ ಸಿಎಂ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಜಿ.ಪರಮೇಶ್ವರ್ ಮೈಸೂರಿನಲ್ಲಿ ಹೇಳಿದರು. ಮುಂದಿನ ತಿಂಗಳು ಚಿತ್ರದುರ್ಗದಲ್ಲಿ ನಡೆಯಲಿರುವ ಎಸ್ಸಿ-ಎಸ್ಟಿ ಐಕ್ಯತಾ ಸಮ್ಮೇಳನದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡುತ್ತಾ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು.
ಕರ್ನಾಟಕದಲ್ಲಿ ಶೆ.24 ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿವೆ. ಅವುಗಳಲ್ಲಿ ಪರಿಶಿಷ್ಟ ಜಾತಿಯ 101 ಹಾಗೂ ಪರಿಶಿಷ್ಟ ಪಂಗಡದ 52 ಜಾತಿಗಳಿವೆ. ಇವರನ್ನೆಲ್ಲ ಒಟ್ಟು ಸೇರಿಸಿ ಜನವರಿ 8 ರಂದು ಚಿತ್ರದುರ್ಗದಲ್ಲಿ ಐಕ್ಯತಾ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ರಾಷ್ಟ್ರ ಮತ್ತು ರಾಜ್ಯದ ನಾಯಕರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮುಂದಿನ ಮುಖ್ಯಮಂತ್ರಿ ಸ್ಥಾನದ ಚರ್ಚೆ ಸದ್ಯಕ್ಕೆ ಅಪ್ರಸ್ತುತ. ಐಕ್ಯತಾ ಸಮಾವೇಶದ ಮೂಲಕ ದಲಿತರಿಗೆ ಸಿಎಂ ಹುದ್ದೆ ಕೊಡಿ ಎಂದು ಬೇಡಿಕೆ ಇಡುವುದಿಲ್ಲ. ಮೊದಲು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಬಹುಮತ ಪಡೆದ ನಂತರ ಶಾಸಕಾಂಗ ಸಭೆಯಲ್ಲಿ ಒಟ್ಟಾಗಿ ನಾಯಕನನ್ನು ಆಯ್ಕೆ ಮಾಡುವುದು ಕಾಂಗ್ರೆಸ್ ಸಂಪ್ರದಾಯ ಎಂದರು.