ಮೈಸೂರು: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಿದ ಸಿಸಿಬಿ ಪೊಲೀಸರು ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬೋಗಾದಿ, ಬಸವೇಶ್ವರ ನಗರದ ಆಶ್ರಯ ಮನೆಯ ಮೇಲೆ ದಾಳಿ ಮಾಡಿದ ವೇಳೆ ಸಿಸಿಬಿ ಪೊಲೀಸರು ಬಂಧಿತರಿಂದ ನಾಲ್ಕು ಸಾವಿರ ರೂ. ವಶಕ್ಕೆ ಪಡೆದಿದ್ದಾರೆ. ಇವರು ವೇಶ್ಯಾವಾಟಿಕೆ ನಡೆಸುವುದಲ್ಲದೇ, ಗಿರಾಕಿ ಮತ್ತು ಹುಡುಗಿಯರ ಫೋನ್ ಸಂಪರ್ಕವಿಟ್ಟುಕೊಂಡು, ಅವರುಗಳಿಗೆ ಬೇಕಾದ ಸ್ಥಳಗಳಿಗೆ ಹುಡುಗಿಯರನ್ನು ಫೋನ್ ಸಂಪರ್ಕಿಸುವ ಮೂಲಕ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ನಗರದ ಸಿಸಿಬಿ ಘಟಕದ ಎಸಿಪಿ ಎಸ್.ಎನ್. ಸಂದೇಶ್‌ಕುಮಾರ್ ಮಾರ್ಗದರ್ಶನದಲ್ಲಿ ದಾಳಿ ಮಾಡಿದ ಸಿಸಿಬಿ ಘಟಕದ ಇನ್ಸ್‌ಪೆಕ್ಟರ್ ಎ. ಮಲ್ಲೇಶ್, ಎಸ್‌ಐ ಪ್ರತಿಭಾ ಜಂಗವಾಡ, ರಾಜು ಕೋನಕೇರಿ, ಎಎಸ್‌ಐ ಟಿ. ಸತೀಶ್, ಸಿಬ್ಬಂದಿ ಪುರುಷೋತ್ತಮ, ಮಂಜುನಾಥ್, ಅರುಣ್‌ಕುಮಾರ್, ರಘು, ಮಮತ ಎನ್. ಜಿ ಹಾಗೂ ಕೆ.ಜಿ. ಶ್ರೀನಿವಾಸ ತಂಡ ವೇಶ್ಯಾವಾಟಿಕೆ ದಂಧೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಕಳ್ಳನ ಬಂಧನ, ಅಪಾರ ಮೌಲ್ಯದ ಆಭರಣ ವಸ್ತು ವಶ:ಕಳ್ಳನನ್ನು ಬಂಧಿಸಿ ಆತನಿಂದ 4.7 ಲಕ್ಷ ರೂ. ವೌಲ್ಯದ 53 ಗ್ರಾಂ ಚಿನ್ನದ ಆಭರಣಗಳು, 1 ಕೆ.ಜಿ 500 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು ಹಾಗೂ ಒಂದು ಟಿವಿಎಸ್ ಹಾಗೂ ಒಂದು ದ್ವಿಚಕ್ರ ವಾಹನವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ ಪ್ರಕರಣದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ಆರೋಪಿಯು ಮೈಸೂರು ನಗರ ಹಾಗೂ ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಮನೆಕಳ್ಳತನ ಮತ್ತು ದ್ವಿ ಚಕ್ರವಾಹನ ಕಳ್ಳತನ ಮಾಡಿರುವದಾಗಿ ಒಪ್ಪಿಕೊಂಡಿದ್ದಾನೆ. ಕಳ್ಳನ ವಿರುದ್ಧ ಮೈಸೂರು ನಗರ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ 1 ಮನೆಕಳ್ಳತನ ಮತ್ತು ಮಂಡ್ಯದಲ್ಲಿ 2 ಮನೆಕಳ್ಳತನ, ಮತ್ತು ಬಿಳಿಗೆರೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 01 ದ್ವಿ ಚಕ್ರವಾಹನ ಕಳ್ಳತನ ಮಾಡಿರುವ ಕುರಿತಾಗಿ ಪ್ರಕರಣ ದಾಖಲಾಗಿವೆ.