ಕರ್ನಾಟಕ

karnataka

ETV Bharat / state

ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ನ.21ರಂದು ಸಭೆ: ಸಿಎಂ ಸಿದ್ದರಾಮಯ್ಯ - ಸಿಎಂ ಸಿದ್ದರಾಮಯ್ಯ ಸಭೆ

ಕಬ್ಬು ಬೆಳೆಗಾರರ ಸಮಸ್ಯೆಗಳ ಬಗೆಹರಿಸಲು ಸಿಎಂ ಸಿದ್ದರಾಮಯ್ಯ ನ.21ರಂದು ಸಭೆ ಕರೆಯುವುದಾಗಿ ಹೇಳಿದ್ದಾರೆ.

ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ನ.21ರಂದು ಸಭೆ
ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ನ.21ರಂದು ಸಭೆ

By ETV Bharat Karnataka Team

Published : Nov 18, 2023, 9:17 PM IST

ಮೈಸೂರು: ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು, ನ.21ರಂದು ಬೆಂಗಳೂರಿನಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು, ಸಚಿವರ ಸಭೆ ಕರೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮನ್ನು ಭೇಟಿಯಾದ ಕಬ್ಬು ಬೆಳೆಗಾರರ ಸಂಘದ ರೈತರಿಗೆ ಭರವಸೆ ನೀಡಿದರು.

ತಮ್ಮ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹಾಗೂ ರೈತರೊಡನೆ ಚರ್ಚೆ ನಡೆಸಿದರು. ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ರೈತರ ಬಗ್ಗೆ ರಕ್ಷಣಾತ್ಮಕ ನಿರ್ಧಾರ ಕೈಗೊಳ್ಳುತೇವೆ. ಹೋರಾಟಗಾರರ ಬಗ್ಗೆ ಪೊಲೀಸರ ವರ್ತನೆ ಸರಿಪಡಿಸಿಕೊಳ್ಳುವಂತೆ ಸೂಚಿಸುತ್ತೇನೆ ಎಂದು ತಿಳಿಸಿದರು.

ಈ ವೇಳೆಯಲ್ಲಿ ಕುರುಬೂರು ಶಾಂತಕುಮಾರ್ ಮಾತನಾಡಿ, ರಾಜ್ಯದಲ್ಲಿ ಕಬ್ಬು ಬೆಳೆ ಕಳೆದ ವರ್ಷಕ್ಕಿಂತ ಶೇ.50ರಷ್ಟು ಕಡಿಮೆ ಇದ್ದು, ಬೇರೆ ಜಿಲ್ಲೆಗಳ ಕಾರ್ಖಾನೆಗಳು ಪೈಪೋಟಿಯಲ್ಲಿ ಕಬ್ಬಿನ ಹೆಚ್ಚುವರಿ ದರ ನೀಡುತ್ತಿದ್ದಾರೆ. ಸಿಎಂ ಕ್ಷೇತ್ರದ ಬಣ್ಣಾರಿ ಕಾರ್ಖಾನೆಯಲ್ಲಿ ಅತಿ ಕಡಿಮೆ ನೀಡುತ್ತಿದ್ದಾರೆ. 4 ತಿಂಗಳಿಂದ ನಾಲ್ಕು ಸಭೆ ನಡೆದರೂ ರೈತರಿಗೆ ನ್ಯಾಯ ಸಿಕ್ಕಿಲ್ಲ ಎಂದರು.

ಬಣ್ಣಾರಿ ಅಮ್ಮನ್ ಕಾರ್ಖಾನೆಯವರು ಬಾಕಿ ಹಣ ನೀಡದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನಿಮ್ಮ ಕ್ಷೇತ್ರಕ್ಕೆ ಸಂಬಂಧಪಟ್ಟ 25 ಸಾವಿರ ರೈತರು ಈ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡುತ್ತಿದ್ದಾರೆ. ಅವರ ಹಿತಸಕ್ತಿ ಯಾಕೆ ಕಾಪಾಡುತ್ತಿಲ್ಲ? ಧಾರವಾಡ ಜಿಲ್ಲೆಯ ಮಂತ್ರಿಗಳು ಸಕ್ಕರೆ ಕಾರ್ಖಾನೆ ಸಭೆ ನಡೆಸಿ ಟನ್‌ಗೆ ಹೆಚ್ಚುವರಿ 150 ರೂ., ದರ ನಿಗದಿಪಡಿಸಿ, ಕಾರ್ಖಾನೆ ಆರಂಭಿಸಿ ಪಾವತಿಸುತಿದ್ದಾರೆ. ಆದರೆ, ನೀವು ಯಾಕೆ ಈ ಬಗ್ಗೆ ಚಿಂತನೆ ನಡೆಸುತ್ತಿಲ್ಲ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.

ರೈತರು ಬರಗಾಲ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಹಣ ಕೊಡಿಸಿದರೆ ತುಂಬಾ ಅನುಕೂಲವಾಗುತ್ತದೆ . ಕಾರ್ಖಾನೆ ಕೇವಲ ಇನ್ನೂ ಎರಡು ತಿಂಗಳು ಮಾತ್ರ ಇರುತ್ತದೆ. ಆದ್ದರಿಂದ ತಕ್ಷಣ ತಾವು ಸಭೆ ನಡೆಸಿ, ಹಣ ಕೊಡಿಸಬೇಕು. ಅಡ್ವೋಕೆಟ್​ ಜನರಲ್ ಅವರು ನ್ಯಾಯಾಲಯದಲ್ಲಿ ಸರಕಾರದ ಆದೇಶವನ್ನು ಎತ್ತಿ ಹಿಡಿಯದೇ ಸಮರ್ಥ ವಾದ ಮಂಡಿಸದೇ ಇರುವ ಕಾರಣ, ರಾಜ್ಯದ ಸುಮಾರು 40 ಲಕ್ಷ ಕಬ್ಬು ಬೆಳೆಗಾರರಿಗೆ 950 ಕೋಟಿಗೂ ಹೆಚ್ಚು ಮೋಸವಾಗುತ್ತಿದೆ ಎಂದು ವಿವರಿಸಿದರು.

ರಾಜ್ಯಾದ್ಯಂತ ವಿದ್ಯುತ್ ಸಮಸ್ಯೆ ಎದುರಾಗಿದೆ. ರೈತರಿಗೆ ಹಗಲು ಹೊತ್ತಿನಲ್ಲಿ 10 ಗಂಟೆ ವಿದ್ಯುತ್ ಕೊಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದು ಅದು ಹುಸಿಯಾಗಿದೆ. ಈಗ ಕೇವಲ ಮೂರು ಗಂಟೆ ನಾಲ್ಕು ಗಂಟೆ ಮಾತ್ರ ವಿದ್ಯುತ್ ನೀಡುತ್ತಿದ್ದಾರೆ. ಅದನ್ನು ರಾತ್ರಿ ಪಾಳಯದಲ್ಲಿ ನೀಡುತ್ತಿದ್ದಾರೆ. ಇದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಆದ್ದರಿಂದ ನೀವು ಚುನಾವಣೆಗೆ ಮುಂಚೆ ಹೇಳಿದಂತೆ ನಡೆದುಕೊಳ್ಳಬೇಕು, ಪ್ರತಿ ದಿನ ಹಗಲು ವೇಳೆ 10 ಗಂಟೆ ವಿದ್ಯುತ್ ನೀಡುವಂತೆ ಆದೇಶ ಮಾಡಬೇಕು ಎಂದು ಮನವಿ ಮಾಡಿದರು.

ರಾಜ್ಯಾದ್ಯಂತ ಬರಗಾಲ ಎದುರಾಗಿದ್ದು, 226 ತಾಲೂಕುಗಳನ್ನು ಬರಗಾಲ ಪ್ರದೇಶ ಎಂದು ಘೋಷಣೆ ಮಾಡಿದ್ದೀರಿ. ಆದರೆ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಆದ್ದರಿಂದ ಪರಿಹಾರ ಹಣ ಕೂಡಲೇ ಬಿಡುಗಡೆ ಮಾಡಿ ರೈತರ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಅಥಣಿ: ಅನ್ನಭಾಗ್ಯ ಯೋಜನೆ ಅಕ್ಕಿ ಕಡಿತ.. ರಡ್ಡೇರಹಟ್ಟಿ ಗ್ರಾಮದ ಜನರ ಆರೋಪ

ABOUT THE AUTHOR

...view details