ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿ, ಜಾಹೀರಾತಿಗೆ ಪ್ರಮಾಣೀಕರಣ ಕಡ್ಡಾಯ: ಅಭಿರಾಮ್ ಜಿ.ಶಂಕರ್
ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿ ಮತ್ತು ಜಾಹೀರಾತುಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿ ತಿಳಿಸಿದರು.
ಜಿಲ್ಲಾ ಚುನಾವಣಾ ಅಧಿಕಾರಿ
ಮೈಸೂರು :ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿ ಹಾಗೂ ಜಾಹೀರಾತುಗಳ ಬಗ್ಗೆ ನಿಗಾ ವಹಿಸಲು ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ ರಚಿಸಿದ್ದು, ಸಮಿತಿಯು ಮೈಸೂರು ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ಲೋಕಸಭಾಚುನಾವಣೆ ಹಿನ್ನೆಲೆಯಲ್ಲಿ ಮಾಧ್ಯಮ ಮಿತ್ರರಿಗೆ ಚುನಾವಣಾ ನೀತಿ, ನಿಯಮಗಳು ಕುರಿತು ಸಲಹೆ ಸೂಚನೆ ನೀಡಲು ಹಾಗೂ ವಿ.ವಿ ಪ್ಯಾಟ್ ಬಳಕೆ ಬಗ್ಗೆ ಅರಿವು ಮೂಡಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಚುನಾವಣಾ ಜಾಹೀರಾತುಗಳನ್ನು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರ ಮಾಡಲು ಮಾಧ್ಯಮ ಪ್ರಮಾಣೀಕರಣ ಸಮಿತಿಯಿಂದ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ.
ಅಭ್ಯರ್ಥಿಗಳು ಅನುಮೋದನೆಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಮಾಧ್ಯಮದವರು ತಮ್ಮ ವಾಹಿನಿಗಳಲ್ಲಿ ಜಾಹೀರಾತು ಪ್ರಸಾರ ಮಾಡುವ ಮೊದಲು ಅನುಮೋದನೆ ಪತ್ರವನ್ನು ಪಡೆದಿಕೊಳ್ಳಿ ಎಂದರು. ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ಪ್ರಕಟಿಸಲು ಅನುಮೋದನೆಯ ಅವಶ್ಯಕತೆ ಇಲ್ಲ. ಆದರೆ ಮತದಾನ ಅಂತ್ಯಗೊಳ್ಳುವ 48 ಗಂಟೆಗಳ ಮುಂಚಿತವಾಗಿ ಪ್ರಕಟಿಸುವ ಜಾಹೀರಾತಿಗೆ ಅನುಮೋದನೆ ಕಡ್ಡಾಯವಾಗಿರುತ್ತದೆ. ಏ17 ಹಾಗೂ 18 ರಂದು ಪ್ರಕಟಿಸುವ ಜಾಹೀರಾತುಗಳಿಗೆ ಅನುಮೋದನೆ ಕಡ್ಡಾಯವಾಗಿರುತ್ತದೆ.ಚುನಾವಣಾ ಸಮಯದಲ್ಲಿ ಹಲವಾರು ಸುಳ್ಳು ಸುದ್ದಿಗಳು ಬರುತ್ತವೆ. ಅಂತಹ ಸುದ್ದಿಯನ್ನು ಬಿತ್ತರಿಸಬೇಡಿ. ಅಭ್ಯರ್ಥಿ, ಪಕ್ಷ ಕುರಿತ ಸುದ್ದಿಯನ್ನು ವರದಿ ಮಾಡುವಾಗ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಎಂದು ಮನವಿ ಮಾಡಿದರು.
ಮತ ಚಲಾಯಿಸುವ ಬ್ಯಾಲೆಟ್ ಯುನಿಟ್, ಮತ ಸಂಗ್ರಹಣೆಯ ಕಂಟ್ರೋಲ್ ಯುನಿಟ್ ಹಾಗೂ ಮತ ಚಲಾವಣೆ ನಂತರ ಮತ ಹಾಕಿರುವ ಪ್ರಿಂಟ್ ಮಾಡುವ ವಿವಿಪ್ಯಾಟ್ ಯುನಿಟ್ ಈ ಮೂರು ಮತದಾನ ಪ್ರಕ್ರಿಯೆಯ ಪ್ರಮುಖ ಸಾಧನಗಳಾಗಿವೆ. ಬ್ಯಾಲೆಟ್ ಯುನಿಟ್‍ಗೆ ಅಭ್ಯರ್ಥಿ ಹೆಸರು ಹಾಗೂ ಅವರ ಚಿಹ್ನೆ ಅಳವಡಿಸಬಹುದು ಹೊರತು ಬೇರೆ ಏನನ್ನೂ ಸಹ ಅಳವಡಿಕೆ ಮಾಡಲು ಸಾಧ್ಯವಿಲ್ಲ. ಯಾರೂ ಮತಯಂತ್ರದ ಮೇಲೆ ಅನುಮಾನ ಪಡುವುದು ಬೇಡ. ಸಾರ್ವಜನಿಕರಿಗೆ ಮತ ಚಲಾಯಿಸುವ ಕುರಿತು ಅರಿವು ಮೂಡಿಸಲು ಈಗಾಗಲೇ 191 ತಂಡಗಳ ರಚನೆ ಮಾಡಿ ಹಲವಾರು ಕಾಲೇಜುಗಳಲ್ಲಿ, ಗ್ರಾಮ ಪಂಚಾಯತಿಗಳಲ್ಲಿ ಹಾಗೂ ಜನ ಸೇರುವ ಕಡೆ ಮಾದರಿ ಮೂಲಕ ಜನತೆಗೆ ಅರಿವು ಮೂಡಿಸಲಾಗುತ್ತಿದೆ ಹಾಗೂ ರೈಲ್ವೆ ನಿಲ್ದಾಣ, ಮಾರುಕಟ್ಟೆ, ಇಂತಹ ಸ್ಥಳಗಳಲ್ಲಿ ಕೂಡ ಅರಿವು ಮೂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.