ಮೈಸೂರು:ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾಹೀರಾತು ಫಲಕ, ಹೋರ್ಡಿಂಗ್ಸ್, ಬಂಟಿಂಗ್ಸ್, ಫ್ಲೆಕ್ಸ್, ಭಿತ್ತಿಪತ್ರ, ಕಟೌಟ್, ಗೋಡೆಬರಹಗಳನ್ನು ನಿಷೇಧಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಹಾಗೂ The Karnataka Open Places (Prevention Of Disfigurement) Act-1981 ಮತ್ತು ಕರ್ನಾಟಕ ಪೌರ ನಿಗಮಗಳ ಕಾಯ್ದೆ 1976 ಪ್ರಕರಣ 135ರ ಪ್ರಕಾರ, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದ ಅಥವಾ ಇನ್ನಿತರೇ ಯಾವುದೇ ರೀತಿ ಜಾಹೀರಾತು ಫಲಕ, ಹೋರ್ಡಿಂಗ್ಸ್, ಬಂಟಿಂಗ್ಸ್, ಫ್ಲೆಕ್ಸ್, ಭಿತ್ರಿಪತ್ರ, ಕಟೌಟ್, ಬ್ಯಾನರ್, ಗೋಡೆಬರಹ ಇವುಗಳನ್ನು ಹಾಕುವುದು ಹಾಗೂ ಅಂಟಿಸುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಈ ತಕ್ಷಣದಿಂದ ಜಾರಿಗೆ ಬರುವಂತೆ ಮೈಸೂರು ಮಹಾನಗರ ಪಾಲಿಕೆಯಿಂದ ಆದೇಶ ಹೊರಡಿಸಲಾಗಿದೆ.
ಅನಧಿಕೃತವಾಗಿ ಬ್ಯಾನರ್ ಹಾಕಿದರೆ ಕಾನೂನು ಕ್ರಮ:ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಈಗಾಗಲೇ ಅನುಮತಿ ಪಡೆದಿರುವ ಅಧಿಕೃತ ಸ್ಥಳಗಳನ್ನು ಹೊರತುಪಡಿಸಿ, ಉಳಿದ ಯಾವುದೇ ಸ್ಥಳದಲ್ಲಿ ಚುನಾವಣೆಗೆ ಸಂಬಂಧಿಸಿದ ಅಥವಾ ಇನ್ನಿತರೇ ಯಾವುದೇ ರೀತಿ ಜಾಹೀರಾತು ಫಲಕ, ಹೋರ್ಡಿಂಗ್ಸ್, ಬಂಟಿಂಗ್ಸ್, ಭಿತ್ತಿಪತ್ರ, ಕಟೌಟ್, ಗೋಡೆಬರಹ, ಬ್ಯಾನರ್‌ಗಳನ್ನು ಹಾಕುವಂತಿಲ್ಲ. ಒಂದು ವೇಳೆ ಮೇಲ್ಕಂಡ ನಿಯಮಗಳನ್ನು ಉಲ್ಲಂಘಿಸಿ ನಗರ ಪ್ರದೇಶದ ಯಾವುದೇ ಸ್ಥಳದಲ್ಲಿ (ಅಧಿಕೃತ ಸ್ಥಳ ಬಿಟ್ಟು) ಅನಧಿಕೃತವಾಗಿ ಬ್ಯಾನರ್ ಹಾಕಿದ್ದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏ.1ಕ್ಕೆ ನಗದು, ವಸ್ತುಗಳನ್ನು ವಶಪಡಿಸಿಕೊಂಡಿದ್ದ ಪೊಲೀಸರು:ಕರ್ನಾಟಕ ವಿಧಾನಸಭೆ 2023ರ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ನೀತಿ ಸಂಹಿತೆ ಜಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಚೆಕ್ ಪೋಸ್ಟ್ಗಳಲ್ಲಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಇದರ ನಡುವೆ ರಾಜ್ಯದ ಹಲವು ಚೆಕ್ ಪೋಸ್ಟ್ಗಳಲ್ಲಿ ಅಕ್ರಮವಾಗಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ನಗದು ಮತ್ತು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.