ಮೈಸೂರು:ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿಯನ್ನು ಮೈಸೂರು ಪೊಲೀಸರು ಗುಜರಾತ್‌ನಲ್ಲಿ ಶುಕ್ರವಾರ ಬಂಧಿಸಿದ್ದಾರೆ. ಯುವತಿಯೊಬ್ಬರಿಗೆ ಕೆಲಸ ನೀಡುವ ಭರವಸೆ ನೀಡಿ ಅವರನ್ನು ಬಲವಂತವಾಗಿ ವಿವಾಹವಾಗಿ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಸ್ವತಃ ಸಂತ್ರಸ್ತೆಯೇ ಆತನ ವಿರುದ್ಧ ಮೈಸೂರಿನಲ್ಲಿ ದೂರು ದಾಖಲಿಸಿದ್ದರು.
ಈ ದೂರಿನ ನಂತರ ರಾಜ್ಯ ರಾಜಕಾರಣದಲ್ಲಿ ಕೆ.ಎಸ್.ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ ಬಾರಿ ಸದ್ದು ಮಾಡಿತ್ತು. ದೂರು ದಾಖಲಿ ಹತ್ತು ದಿನವಾದರೂ ಆತ ಸಿಕ್ಕಿರಲಿಲ್ಲ. ಕೊನೆಗೂ ಪೊಲೀಸ್ ಬಲೆಗೆ ಸ್ಯಾಂಟ್ರೂ ರವಿ ಬಿದ್ದಿದ್ದಾನೆ. ಕಳೆದ 11 ದಿನಗಳಿಂದ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ದೂರದ ಗುಜರಾತ್‌ನಲ್ಲಿ ಕರ್ನಾಟಕ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ವಿಷಯವನ್ನು ಎಡಿಜಿಪಿ ಅಲೋಕ್ ಕುಮಾರ್ ದೃಢಪಡಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಎಡಿಜಿಪಿ ಹೇಳಿದ್ದಿಷ್ಟು:ಸುದ್ದಿಗೋಷ್ಠಿ ಉದ್ದೇಶಿಸಿಮಾತನಾಡಿದ ಅಲೋಕ್ ಕುಮಾರ್, ’’ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿ ಗುಜರಾತ್ನ ಅಹಮದಾಬಾದ್ನಲ್ಲಿ ತಲೆ ಮರೆಸಿಕೊಂಡಿದ್ದ. ಮೈಸೂರು ಪೊಲೀಸರು ಗುಜರಾತ್ ಪೊಲೀಸರ ಸಹಾಯದಿಂದ ರವಿಯನ್ನು ಚೇಸ್ ಮಾಡಿ ಬಂಧಿಸಿದ್ದಾರೆ. ಇಲ್ಲಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ 12ನೇ ದಿನದ ಹಿಂದೆ ರವಿ ವಿರುದ್ಧ ಕೇಸ್ ದಾಖಲಾಗಿತ್ತು. ಮೈಸೂರು ಕಮಿಷನರ್ ರಮೇಶ್ ಅವರ ನೇತೃತ್ವದಲ್ಲಿ ವಿವಿಧ ತಂಡಗಳನ್ನು ಮಾಡಿಕೊಂಡು ತನಿಖೆ ಆರಂಭಿಸಿದ್ದರು’’ ಎಂದರು.
’’ರಾಜ್ಯದಲ್ಲಿ ರವಿಯ ಬಂಧನಕ್ಕೆ ಹುಡುಕಾಟ ಆರಂಭಿಸಿದ ನಂತರ ಹೊರ ರಾಜ್ಯದಲ್ಲಿ ಓಡಾಟ ಶುರುವಾಗಿತ್ತು. ಈ ಸುಳಿವು ಪೊಲೀಸ್ ಇಲಾಖೆಗೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಿಗೆ ತಂಡಗಳನ್ನು ಕಳುಹಿಸಿ ಕೊಡಲಾಗಿತ್ತು. ನಿನ್ನೆ ತೆಲಂಗಾಣದಲ್ಲಿ ಆತ ಇದ್ದ ಎಂಬುದಾಗಿ ತಿಳಿದು ಬಂದಿತ್ತು. ಅಲ್ಲಿ ಹುಡುಕಾಟ ನಡೆಸಿದಾಗ ಸಿಕ್ಕಿರಲಿಲ್ಲ. ಈತ ದಿನಕ್ಕೊಂದು ಸ್ಥಳ ಬದಲಾವಣೆ ಮಾಡಿಕೊಂಡು ತಲೆಯಲ್ಲಿದ್ದ ವಿಗ್ ಅನ್ನ ತೆಗೆದು, ತಲೆ ಮರೆಸಿಕೊಂಡು ಓಡಾಡಿ ಪೊಲೀಸ್ ಕಾರ್ಯಾಚರಣೆ ದಾರಿ ತಪ್ಪಿಸುತ್ತಿದ್ದ. ಇವತ್ತು ಗುಜರಾತ್ನ ಅಹಮದಾಬಾದ್ನಲ್ಲಿರುವುದು ತಿಳಿದು ಅಲ್ಲಿನ ಸ್ಥಳೀಯ ಪೊಲೀಸರ ಸಹಾಯದಿಂದ ರವಿಯನ್ನು ಬಂಧಿಸಲಾಗಿದೆ. ಗುಜರಾತ್ ಕೋರ್ಟ್ಗೆ ಹಾಜರುಪಡಿಸಿ ನಂತರ ರಾಜ್ಯಕ್ಕೆ ಕರೆತರಲಾಗುವುದು‘‘ ಎಂದು ಇದೇ ವೇಳೆ ಅಲೋಕ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.