ಮೈಸೂರು : ಬ್ರಿಟಿಷರು ಮೈಸೂರಿನಲ್ಲಿ ಅಧಿಪತ್ಯ ಸಾಧಿಸಿ ಹೋಗಿದ್ದರೂ, ಎಂಬುವುದಕ್ಕೆ ಇಂದಿಗೂ ಹುಡುಕಿದರೂ ಅನೇಕ ಕುರುಹುಗಳು ಸಿಗುತ್ತವೆ. ಅಂತೆಯೇ ಮೈಸೂರಿನಲ್ಲಿ 250 ವರ್ಷಗಳ ಹಿಂದಿನ ಗೋರಿಗಳು ಬೆಳಕಿಗೆ ಬಂದಿದ್ದು, ಅಚ್ಚರಿ ಮೂಡಿಸಿದೆ. ಹುಣಸೂರಿನ ತಾಲೂಕಿನ ಲಕ್ಷ್ಮಣ ತೀರ್ಥ ನದಿಯ ಕೊನೆಯ ಭಾಗದಲ್ಲಿ ಬ್ರಿಟಿಷರ ಕೆಲವು ಪಾಳು ಬಿದ್ದ ಸಮಾಧಿಗಳಿವೆ. ಅವುಗಳನ್ನು ತಕ್ಷಣಕ್ಕೆ ನೋಡಿದರೆ ಸಮಾಧಿಗಳು ಎನ್ನಲು ಸಾಧ್ಯವಿಲ್ಲ. ಹಳೆಯ ದೇವಾಲಯದ ಗೋಪುರಗಳು ಇರಬಹುದು ಎನಿಸುತ್ತವೆ. ಹತ್ತಿರ ಹೋಗಿ ನೋಡಿದರೆ ಮಾತ್ರ ಬ್ರಿಟಿಷರ ಗೋರಿಗಳು ಕಣ್ಣಿಗೆ ಇತಿಹಾಸದ ನೆನಪುಗಳನ್ನು ತರುತ್ತವೆ.
ಇಲ್ಲಿನ ಗೋರಿಗಳನ್ನು ನೋಡಲು ಹೋದರೆ ಪೊದೆ ಗಿಡಗಳು ಆವರಿಸಿಕೊಂಡಿದ್ದು, ವಿಪರೀತವಾದ ಸೊಳ್ಳೆಗಳು ಕಾಟವು ಜಾಸ್ತಿ ಇದೆ. ಕೆಟ್ಟ ವಾಸನೆಯೂ ಮೂಗಿಗೆ ಬಡಿಯುತ್ತವೆ. ಇಂತಹ ಸ್ಥಳದಲ್ಲಿ ಬ್ರಿಟಿಷರ ಗೋರಿಗಳು ಯಾರ ಕಣ್ಣಿಗೂ ಬೀಳದೇ ಇರುವುದು ಅಚ್ಚರಿ ತಂದಿದೆ. ಸುಮಾರು 250 ವರ್ಷಗಳಿಂದ ಸದ್ದಿಲ್ಲದೇ ಮಲಗಿದ್ದ ಬ್ರಿಟಿಷ್ ಸಮಾಧಿಗಳು ಇದೀಗ ಜನರ ಆಸಕ್ತಿಯನ್ನು ಕೆರಳಿಸುತ್ತಿದೆ. ಈ ಸಮಾಧಿ ಅಕ್ಕ ಪಕ್ಕದಲ್ಲಿ ವಾಸವಿ ಗೋಶಾಲೆ ಮತ್ತು ವಾಸವಿ ವಾನ ಪ್ರಸ್ತಾಶ್ರಮ ಇದೆ.
ಬ್ರಾಹ್ಮಣರ ಬೀದಿಯ ಬಳಿ ಇರುವ ಹಳೆ ಪೋಸ್ಟ್ ಆಫೀಸ್ನ ರಸ್ತೆ ಮೂಲಕ ಸ್ವಲ್ಪ ದೂರ ಸಾಗಿದರೆ ಈ ಗೋರಿಗಳನ್ನು ಕಾಣಬಹುದು. ಆದರೆ ಸದ್ಯಕ್ಕೆ ಇವುಗಳನ್ನು ಬಹಳ ಹತ್ತಿರದಿಂದ ನೋಡಲು ಸಾಧ್ಯವಿಲ್ಲ. ಸಂಪೂರ್ಣ ಗಿಡಗಂಟೆಗಳು ಗೋರಿಯ ಕಲ್ಲುಗಳನ್ನು ಮುಚ್ಚಿಕೊಂಡಿದ್ದು, ದೂರದಿಂದ ಅಷ್ಟೋ ಇಷ್ಟು ಕಾಣಬಹುದು. ಶತಮಾನಗಳಿಂದ ಈ ಗೋರಿಗಳ ಬಗ್ಗೆ ಸ್ಥಳೀಯರಿಗೆ ಸಹ ಸರಿಯಾದ ಮಾಹಿತಿ ಇಲ್ಲ. ಅಂದಿನ ಬ್ರಿಟಿಷ್ ಮೈಸೂರು, ಹುಣಸೂರನ್ನು ಒಳಗೊಂಡಿದ್ದರಿಂದ ಇದು ಬ್ರಿಟೀಷ್ ಉನ್ನತ ಅಧಿಕಾರಗಳ ಗೋರಿಗಳು ಸಹ ಆಗಿರಬಹುದು ಎಂಬ ಸಂಶಯ ಇದೆ.
ಕೆಲವು ಗೋರಿಗಳು ಸಮತಟ್ಟವಾದ ಆಕಾರದಲ್ಲಿ ಇದ್ದರೆ ಇನ್ನು ಕೆಲವು ಗೋರಿಗಳು ವೃತ್ತಾಕಾರದಲ್ಲಿ ಮತ್ತು ಗೋಪುರಗಳ ಆಕಾರದಲ್ಲಿರುವುದು ವೈಶಿಷ್ಟ್ಯ ಪೂರ್ಣ ಎನ್ನಬಹುದು. ಒಂದೆರಡು ಗೋರಿಗಳು ಶತಮಾನಗಳ ಮಳೆ ಮತ್ತು ಬಿಸಿಲನ್ನು ತಾಳಿಕೊಂಡು ಸ್ವಲ್ಪ ಸುರಕ್ಷಿತವಾಗಿದೆ. ಕೆಲವು ಸ್ಥಳೀಯರ ಪ್ರಕಾರ ಕೊಡಗಿನ ಕಾಫಿ ತೋಟಗಳ ಮಾಲೀಕರಾಗಿದ್ದ ಕೆಲವು ಬ್ರಿಟಿಷರ ಸಮಾಧಿಗಳು ಎನ್ನುತ್ತಾರೆ. ಕೆಲವು ಸಮಾಧಿಗಳಲ್ಲಿ ಮೃತಪಟ್ಟವರ ಹೆಸರು, ವಯಸ್ಸು ಲಿಂಗ ಮೃತಪಟ್ಟ ಕಾರಣ ಮುಂತಾದ ವಿವರಗಳು ಇವೆ ಎನ್ನಬಹುದು.
ಗೋರಿ ಮೇಲೆ ಮೃತಪಟ್ಟವರ ವಯಸ್ಸೂ ನಮೂದು:ಇಲ್ಲಿ ಮೃತಪಟ್ಟವರ ವಯಸ್ಸು 29 ಇದ್ದರೆ ಇನ್ನು ಕೆಲವು ಗೋಡೆಗಳಲ್ಲಿ 53 ಎಂದು ನಮೂದಿಸಲಾಗಿದೆ. ಮೃತಪಟ್ಟವರು ಒಂದೇ ಕುಟುಂಬದ ಪತಿ-ಪತ್ನಿ ಮಕ್ಕಳು ಸಹ ಆಗಿರುವ ಸಾಧ್ಯತೆ ಇದೆ ಎಂದು ಗೋರಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಹೇಳಬಹುದು. ಇನ್ನು ಕೆಲವು ಗೋರಿಗಳಲ್ಲಿ ಮೃತಪಟ್ಟವರ ನಿಖರವಾದ ವಯಸ್ಸು, ತಿಂಗಳು ಮತ್ತು ದಿನಗಳನ್ನು ಸ್ಪಷ್ಟವಾಗಿ ನಮೂದಿಸಿರುವುದು ಗಮನಿಸಬಹುದು. ಒಂದು ಗೋರಿಯಲ್ಲಿ ಮಣ್ಣು ಮಾಡಿರುವ ಇಬ್ಬರ ಬಗ್ಗೆ ವಿವರಗಳು ಇರುವುದು ತೀರ ಆಸಕ್ತಿದಾಯಕವಾಗಿದೆ.