ಕರ್ನಾಟಕ

karnataka

ETV Bharat / state

ಕೈಕಾಲು ಕತ್ತರಿಸಿದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ: ಸಕ್ಕರೆನಾಡಲ್ಲಿ ಮತ್ತೊಂದು ಭಯಾನಕ ಮರ್ಡರ್ - Unidentified body found

ಮಂಡ್ಯ ಜಿಲ್ಲೆಯನ್ನು ಬೆಚ್ಚಿಬೀಳಿಸಿದ ಕ್ರೌರ್ಯ ಪ್ರಕರಣ - ವ್ಯಕ್ತಿಯನ್ನು ಬರ್ಬರವಾಗಿ ಕೊಂದ ದುರುಳರು - ಮೃಹದೇಹದ ಅಂಗಾಂಗಗಳು ನಾಲೆಯಲ್ಲಿ ಪತ್ತೆ

Unidentified body found In Mandya
Unidentified body found In Mandya

By

Published : Feb 23, 2023, 9:50 AM IST

Updated : Feb 23, 2023, 1:10 PM IST

ಮಂಡ್ಯ:ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆಗೈದ ಹಂತಕರು ಮೃತದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ ನಾಲೆಗೆ ಎಸೆದಿರುವ ಭಯಾನಕ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಕ್ರೂರಿ ಕೊಲೆಪಾತಕರು ವ್ಯಕ್ತಿಯ ಕೈ, ಕಾಲು, ದೇಹ, ರುಂಡ-ಮುಂಡಗಳನ್ನು ಬಿಡಿ ಬಿಡಿಯಾಗಿ ತುಂಡರಿಸಿದ್ದು ಅವುಗಳನ್ನು ನಾಲೆಗೆ ಎಸೆದಿದ್ದಾರೆ. ಮಂಡ್ಯ ತಾಲೂಕಿನ ಹೊಡಾಘಟ್ಟ, ಶಿವಾರ, ಡಣಾಯಕನಪುರ ಹಾಗೂ ಮದ್ದೂರು ತಾಲೂಕಿನ ಗೂಳೂರಿನಲ್ಲಿ ವ್ಯಕ್ತಿಯ ದೇಹದ ಅಂಗಾಂಗಳು ದೊರೆತಿವೆ.

ಕೆರಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ವಿ.ಸಿ.ನಾಲೆಯಲ್ಲಿ ಈ ದೇಹದ ತುಂಡುಗಳು ಪತ್ತೆಯಾಗಿವೆ. ದೇಹದ ಅಂಗಾಂಗಗಳ ಆಧಾರ ಹಿನ್ನೆಲೆಯಲ್ಲಿ 30 ರಿಂದ 40 ವರ್ಷದ ಆಸುಪಾಸಿನ ಪುರುಷ ವ್ಯಕ್ತಿ ಇರಬಹುದೆಂದು ಪೊಲೀಸರು ಅಂದಾಜು ಮಾಡಿದ್ದಾರೆ. ಇತ್ತೀಚೆಗೆ ನಡೆದ ದೆಹಲಿಯ ಶ್ರದ್ಧಾ ವಾಕರ್​ ಹತ್ಯೆ ಪ್ರಕರಣ ದೇಶಾದ್ಯಂತ ಸಾಕಷ್ಟು ಚರ್ಚೆ ಆಗಿತ್ತು. ಸಕ್ಕರೆ ನಾಡಿನಲ್ಲೂ ಇದೇ ರೀತಿಯ ಘಟನೆ ನಡೆದಿದ್ದು, ದೇಹದ ಅಂಗಾಂಗಳು ಬೇರೆ ಪ್ರದೇಶಗಳಲ್ಲಿ ದೊರೆತಿವೆ.

ದುಷ್ಕರ್ಮಿಗಳು ವ್ಯಕ್ತಿಯನ್ನು ಕೊಲೆಗೈದು ಈ ನಾಲೆಗೆ ಎಸೆದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಹೊಡಾಘಟ್ಟ ಬಳಿ ಮೃತ ವ್ಯಕ್ತಿಯ ತೊಡೆ ಮತ್ತು ಸೊಂಟದ ಭಾಗ ಪತ್ತೆಯಾದರೆ, ಶಿವಾರದ ಸಮೀಪ ಒಂದು ಕಾಲು ಪತ್ತೆಯಾಗಿದೆ. ಡಣಾಯಕನಪುರ ಬಳಿ ಎರಡು ಕೈ, ಒಂದು ಕಾಲು ಕಂಡು ಬಂದರೆ, ಗೂಳೂರು ಬಳಿ ತಲೆಯ ಭಾಗ ಪತ್ತೆಯಾಗಿದೆ.

ಮೃತ ವ್ಯಕ್ತಿಯ ಎಡಗೈ ಮೇಲೆ ಕಾವ್ಯ, ರಘು ಎಂದು ಹಚ್ಚೆ ಕಂಡು ಬಂದಿದ್ದು ಬಲಗೈಯಲ್ಲಿ ವನಜಾ ಎಂದು ಹಚ್ಚೆ ಗುರುತು ಇದೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಕೆಎಂ ದೊಡ್ಡಿಯ ಕೆರಗೂಡು ಪೊಲೀಸರು ಮೃತದೇಹ ಸಂಗ್ರಹಿಸಿ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಮಂಡ್ಯ ಎಸ್​ಪಿ ಎನ್.ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸ್​ಪಿ ಎನ್.ಯತೀಶ್, ತನಿಖೆಗೆ ಪ್ರತ್ಯೇಕ ತಂಡ ರಚನೆಯ ಬಗ್ಗೆ ಚಿಂತನೆ ನಡೆಸಿದ್ದಾರೆ. ಮೃತದೇಹದ ಗುರುತು ಪತ್ತೆಗೆ ಮುಂದಾಗಿರುವ ಪೊಲೀಸರು ಸಮೀಪದ ಪೊಲೀಸ್ ಠಾಣೆಗಳಿಂದ ನಾಪತ್ತೆ ಪ್ರಕರಣಗಳ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.

ಇಂತಹದ್ದೇ ಘಟನೆಗೆ ಸಾಕ್ಷಿಯಾಗಿದ್ದ ಸಕ್ಕರೆ ನಾಡು:ಕಳೆದ ವರ್ಷ ಇಂತಹದ್ದೇ ಪ್ರಕರಣ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿತ್ತು. ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. 2022ರ ಜೂ.7ರಂದು ಪಾಂಡವಪುರ ತಾಲೂಕಿನ ಬೇಬಿ ಗ್ರಾಮದ ಕೆರೆಕೋಡಿ ಕಟ್ಟೆ ಕೆಳಗೆ ಹರಿಯುವ ನೀರಿನಲ್ಲಿ 30-32 ವರ್ಷ ವಯಸ್ಸಿನ ಅಪರಿಚಿತ ಮಹಿಳೆ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ಮಾಡರಹಳ್ಳಿ ರಸ್ತೆ ಬಳಿ ಸಿಡಿಎಸ್‌ ನಾಲೆಗೆ ಸಂಪರ್ಕಿಸುವ ಸಾಲೋಡು ಹಳ್ಳದ ಪಕ್ಕದ ಕೈಲ ಭತ್ತದ ಗದ್ದೆಯಲ್ಲಿ 40-45 ವರ್ಷ ವಯಸ್ಸಿನ ಮತ್ತೊಬ್ಬ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದವು. ಎರಡೂ ಪ್ರಕರಣಗಳಲ್ಲಿ ತುಂಡರಿಸಿದ್ದ ಮಹಿಳೆಯರ ಅರ್ಧ ದೇಹಗಳು ಮಾತ್ರ ಪತ್ತೆಯಾಗಿದ್ದವು. ಎರಡೂ ಶವಗಳಲ್ಲಿ ಸೊಂಟದಿಂದ ಮೇಲ್ಭಾಗದ ದೇಹವೇ ಇರಲಿಲ್ಲ. ಇದರಿಂದಾಗಿ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಮಂಡ್ಯ ಕೊಲೆ ಪ್ರಕರಣಗಳು ಪೊಲೀಸರಿಗೆ ಸವಾಲಾಗಿದ್ದವು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿರಕ್ಕೂ ಹೆಚ್ಚು ಕರ ಪತ್ರಗಳನ್ನು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಹಂಚಿಕೆ ಮಾಡಿ ಮೃತರ ಗುರುತು ಪತ್ತೆಗಾಗಿ ಜನರು ಹಾಗೂ ಪೊಲೀಸರ ಸಹಕಾರ ಕೋರಲಾಗಿತ್ತು. ಜೊತೆಗೆ 9 ತನಿಖಾ ತಂಡಗಳನ್ನು ರಚಿಸಿ, ತಾಂತ್ರಿಕ ಮಾಹಿತಿ ಕಲೆ ಹಾಕಲು 2 ತಾಂತ್ರಿಕ ಪರಿಣಿತ ತಂಡಗಳನ್ನು ರಚಿಸಲಾಗಿತ್ತು. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ 1,116ಕ್ಕೂ ಹೆಚ್ಚಿನ ಮಹಿಳೆಯರು ಕಾಣೆಯಾದ ಪ್ರಕರಣಗಳನ್ನು ಪರಿಶೀಲಿಸಲಾಗಿತ್ತು.

ಗೀತಾ ಎಂಬ ಮಹಿಳೆ ಕಾಣೆಯಾಗಿದ್ದ ಬಗ್ಗೆ 2022ರ ಜು.7ರಂದು ಚಾಮರಾಜ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿತ್ತು. ಎರಡೂ ಪ್ರಕರಣಗಳಲ್ಲಿ ಸಾಮ್ಯತೆ ಇದ್ದವು. ಸವಾಲಾಗಿದ್ದು ಪ್ರಕರವನ್ನು ಗೀತಾಳ ಮೊಬೈಲ್ ಕರೆಗಳನ್ನು ಆಧರಿಸಿ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದರು. ವಿಚಾರಣೆ ವೇಳೆ ಬೆಂಗಳೂರಿನಲ್ಲಿ ಕುಮುದಾ ಎಂಬ ಮತ್ತೊಬ್ಬ ಮಹಿಳೆಯನ್ನು ಕೊಲೆ ಮಾಡಿ ಚಿತ್ರದುರ್ಗದವರೆಗೆ ಬೈಕ್‌ನಲ್ಲೇ ತಂದಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದರು. ಇದೀಗ ಅಂತಹದ್ದೆ ಪ್ರಕರಣ ಮತ್ತೆ ನಡೆದಿದೆ.

ಇದನ್ನೂ ಓದಿ:ಮಂಡ್ಯ ಡಬಲ್ ಮರ್ಡರ್ ಕೇಸ್: ಶವ ಸಾಗಿಸಲು ಕಷ್ಟವೆಂದು ದೇಹ ಕತ್ತರಿಸಿದ್ರು: ಇಬ್ಬರು ಅರೆಸ್ಟ್!

Last Updated : Feb 23, 2023, 1:10 PM IST

ABOUT THE AUTHOR

...view details