ಮಂಡ್ಯ:ವಿಶ್ವವಿಖ್ಯಾತ ಕೆಆರ್‌ಎಸ್ ಅಣೆಕಟ್ಟೆಗೆ(KRS DAM) ಬೇಬಿಬೆಟ್ಟದಲ್ಲಿ ನಡೆಯುವ ಕಲ್ಲು ಗಣಿಗಾರಿಕೆಯಿಂದಾಗಿ ಅಪಾಯ ಇದೆಯೋ, ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಜುಲೈ 25ರಿಂದ(ನಿನ್ನೆ) ಆರಂಭವಾದ ಟ್ರಯಲ್ ಬ್ಲಾಸ್ಟ್ ಒಂದೇ ದಿನಕ್ಕೆ ಅಂತ್ಯ ಕಂಡಿದೆ. ತೀವ್ರ ವಿರೋಧದ ನಡುವೆಯೂ ಪರೀಕ್ಷಾರ್ಥ ಸ್ಫೋಟ ನಡೆಸಲು ಮುಂದಾಗಿದ್ದ ಜಿಲ್ಲಾಡಳಿತ ಕಡೆಗೂ ರೈತರ ಒತ್ತಡಕ್ಕೆ ಮಣಿದು ತಾತ್ಕಾಲಿಕವಾಗಿ ಟ್ರಯಲ್ ಬ್ಲಾಸ್ಟ್ ಪ್ರಕ್ರಿಯೆಯನ್ನು ಮುಂದೂಡಿದೆ.
ಟ್ರಯಲ್ ಬ್ಲಾಸ್ಟ್ ಮುಂದೂಡಿಕೆ: ಈ ಸಂಬಂಧ ಮಂಡ್ಯದ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ 25 ಜನ ರೈತ ಮುಖಂಡರು ಭಾಗವಹಿಸಿದ್ದರು. ಜಿಲ್ಲಾಧಿಕಾರಿ, ಗಣಿ ಅಧಿಕಾರಿಗಳು, ಎಸ್ಪಿ, ಡಿಸಿಎಫ್ ಸೇರಿದಂತೆ ಹಲವು ಅಧಿಕಾರಿಗಳ ಸಮ್ಮುಖದಲ್ಲಿ ಟ್ರಯಲ್ ಬ್ಲಾಸ್ಟ್ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಚರ್ಚಿಸಿದ ರೈತರು, ಒಂದು ವಾರ ಮುಂದೂಡುವಂತೆ ಒತ್ತಾಯಿಸಿದ್ದರು. ಆದರೆ ತಾಂತ್ರಿಕ ಕಾರಣ ನೀಡಿ ಟ್ರಯಲ್ ಬ್ಲಾಸ್ಟ್ ಅನಿವಾರ್ಯ ಎಂದ ಜಿಲ್ಲಾಧಿಕಾರಿ ಅಶ್ವಥಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಅಲ್ಲಿಂದ ತೆರಳಿದ್ದರು. ಡಿಸಿ ನಿರ್ಧಾರಕ್ಕಾಗಿ ಗಂಟೆಗಟ್ಟಲೇ ಕಾದ ರೈತರು ಯಾವುದೇ ಸ್ಪಷ್ಟನೆ ಬರದ ಕಾರಣ ಜಿಲ್ಲಾಧಿಕಾರಿ ಕಚೇರಿಯಲ್ಲೇ ವಾಸ್ತವ್ಯದ ನಿರ್ಧಾರ ಮಾಡಿದರು. ಕಡೆಗೆ ರೈತರ ಒತ್ತಡಕ್ಕೆ ಮಣಿದ ಜಿಲ್ಲಾಧಿಕಾರಿ ಅವರು ತಾತ್ಕಾಲಿಕವಾಗಿ ಟ್ರಯಲ್ ಬ್ಲಾಸ್ಟ್ ಮುಂದೂಡುವುದಾಗಿ ತಿಳಿಸಿದ್ದಾರೆ.
ಟ್ರಯಲ್ ಬ್ಲಾಸ್ಟ್‌ಗೆ ಪರ ವಿರೋಧ: ಜಾರ್ಖಂಡ್‌ನ ಧನ್ಬಾದ್ನಲ್ಲಿರುವ ಸಿಎಸ್ಐಆರ್ ಸಂಸ್ಥೆಯ ನಾಲ್ವರು ಭೂ ವಿಜ್ಞಾನಿಗಳ ತಂಡ ಬೇಬಿಬೆಟ್ಟ ಸುತ್ತಮುತ್ತ 5 ಕಡೆಗಳಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಸಲು ಆಗಮಿಸಿದ್ದರು. ಜುಲೈ 31ರ ವರೆಗೂ ನಡೆಯಬೇಕಿದ್ದ ಟ್ರಯಲ್ ಬ್ಲಾಸ್ಟ್‌ಗೆ ರೈತರು ಆರಂಭದಲ್ಲೇ ತೀವ್ರ ವಿರೋಧ ವ್ಯಕ್ತಪಡಿಸಿದರು. ವಿಜ್ಞಾನಿಗಳ ವಿರುದ್ಧ ಗೋ ಬ್ಯಾಕ್ ಚಳವಳಿ ಆರಂಭಿಸಿದ ರೈತರು ಕೆಆರ್‌ಎಸ್ ಜಲಾಶಯದ ಮುಖ್ಯದ್ವಾರ ಬಳಿಯಿಂದ ಬೇಬಿಬೆಟ್ಟದವರೆಗೆ ಬೈಕ್ ಜಾಥ ನಡೆಸಿದರು. ಬೇಬಿಬೆಟ್ಟದ ಸಮೀಪದ ಕಾವೇರಿಪುರ ಬಳಿ ಬೈಕ್ ಬರುತ್ತಿದ್ದಂತೆ ಪೊಲೀಸರು ತಡೆಹಿಡಿದರು. ಈ ವೇಳೆ ಸ್ಥಳಕ್ಕೆ ಜಮಾಯಿಸಿದ ಕಾವೇರಿಪುರ, ಬನ್ನಂಗಾಡಿ, ಬೇಬಿ ಸೇರಿದಂತೆ ಹಲವು ಗ್ರಾಮಗಳ ಗ್ರಾಮಸ್ಥರು ಟ್ರಯಲ್ ಬ್ಲಾಸ್ಟ್‌ಗೆ ಒತ್ತಾಯಿಸಿ ರೈತರ ಜೊತೆ ವಾಗ್ವಾದಕ್ಕಿಳಿದರು.