ಮಂಡ್ಯ:ಕಲ್ಲು ಗಣಿಗಾರಿಕೆಯಲ್ಲಿ ಅಕ್ರಮ ನಡೆಯುತ್ತಿದೆ ಎಂಬ ದೂರಿನ ಆಧಾರದ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ನಾಗಮಂಗಲದಲ್ಲಿ ನಡೆದಿದೆ.
ನಾಗಮಂಗಲ ತಾಲೂಕಿನ ಕಬ್ಬಿನಕೆರೆ ಗ್ರಾಮದ ಸರ್ವೆ ನಂಬರ್ 21 ರಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಇಲಾಖೆಯ ನಿರ್ದೇಶಕ ಪ್ರಸನ್ನ ಕುಮಾರ್ ಪರಿಶೀಲನೆ ನಡೆಸಿದ್ದಾರೆ.
ಕಲ್ಲುಗಣಿಗಾರಿಕೆ ಪ್ರದೇಶಕ್ಕೆ ಅಧಿಕಾರಿಗಳ ದಾಳಿ ಪರಿಶೀಲನೆ ವೇಳೆ ಹಲವು ಅಕ್ರಮಗಳು ಕಣ್ಣಿಗೆ ಬಿದ್ದಿವೆ ಎನ್ನಲಾಗಿದ್ದು, ಅಂದಾಜಿನ ಪ್ರಕಾರ ಸುಮಾರು 5 ಎಕರೆ ಭೂ ಪ್ರದೇಶದಲ್ಲಿ 71 ಸಾವಿರ ಮೆಟ್ರಿಕ್ ಟನ್ ಕಲ್ಲನ್ನು ಸಾಗಿಸಲಾಗಿದೆ. ಅನುಮತಿ ಇಲ್ಲದೇ ಇದ್ದರೂ ಸ್ಫೋಟಕ ಬಳಸಿ ಗಣಿಗಾರಿಕೆ ಮಾಡಲಾಗಿದೆ. ಸೆಸ್ಕಾಂ ಅನುಮತಿ ಸಹ ಇಲ್ಲದೇ ವಿದ್ಯುತ್ ಸಂಪರ್ಕ ಪಡೆದಿರೋದು ಬೆಳಕಿಗೆ ಬಂದಿದೆ.
ಇದನ್ನೆಲ್ಲ ಕಣ್ಣಾರೆ ಕಂಡ ಪ್ರಸನ್ನ ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸದಸ್ಯರು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪರಿಶೀಲನೆ ಮಾಡಿದ ವೇಳೆ ನೌಕರರಿಗೆ ಸರಿಯಾದ ಸೌಕರ್ಯ ಇಲ್ಲದೇ ಇರೋದು ಕಂಡು ಬಂದಿದ್ದು, ಮಾಲೀಕರ ಮೇಲೆ ಕ್ರಮ ಕೈಗೊಂಡು ದಂಡ ವಸೂಲಿಯ ಜೊತೆಗೆ ಸ್ಥಳದಲ್ಲಿ ಅಳವಡಿಸಿರುವ ಯಂತ್ರಗಳನ್ನು ವಶಕ್ಕೆ ಪಡೆಯುವಂತೆ ಸೂಚನೆ ನೀಡಿದ್ದಾರೆ.
ತಪಾಸಣೆ ವೇಳೆ ಸ್ಫೋಟಕಗಳು ಕಂಡು ಬಂದಿದ್ದು, ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇವುಗಳನ್ನು ಹೇಗೆ ಬಳಕೆ ಮಾಡಲಾಗಿದೆ ಎಂಬುದರ ತನಿಖೆಗೂ ಸೂಚನೆ ನೀಡಲಾಗಿದೆ.