ಮಂಡ್ಯ:ಚುನಾವಣೆಗೂ ಮುನ್ನವೆ ಸಕ್ಕರೆನಾಡು ಮಂಡ್ಯದಲ್ಲಿ ರಾಜಕೀಯ ಅಖಾಡ ರಂಗೇರಿದೆ ಜಿಲ್ಲೆಯಲ್ಲಿ ಮಹಿಳಾ ಮತದಾರರ ಗಮನ ಸೆಳೆಯಲು ಕಾಂಗ್ರೆಸ್ ಪಕ್ಷ ಸಜ್ಜಾಗಿದ್ದು, ಬೃಹತ್ ಮಹಿಳಾ ಸಮಾವೇಶದ ಆಯೋಜನೆ ಮೂಲಕ ಕೈ ನಾಯಕರು ಮತ ಬೇಟೆಗೆ ಮುಂದಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ವತಿಯಿಂದ ಸೋಮವಾರ ನಾಗಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೊಪ್ಪದಲ್ಲಿ ಬೃಹತ್ ಮಹಿಳಾ ಸಮಾವೇಶ ಏರ್ಪಡಿಸಲಾಗಿತ್ತು. ಈ ಮಹಿಳಾ ಸಮಾವೇಶಕ್ಕೆ ಮುಖ್ಯ ಅತಿಥಿಯಾಗಿ ಕೈ ನಾಯಕಿ, ಮಾಜಿ ಸಚಿವೆ ಉಮಾಶ್ರೀ ಆಗಮಿಸಿದ್ದರು. ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಇರುವವರೆಗೆ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಮುಂದಿನ ತಿಂಗಳಲ್ಲಿ ಚುನಾವಣೆ ಕಾವು ಹೆಚ್ಚಾಗುತ್ತಾ ಹೋಗುತ್ತದೆ. ಈ ಸಂದರ್ಭದಲ್ಲಿ ಮಹಿಳೆಯರು ಜಾಗೃತರಾಗಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷ ಮಹಿಳೆಯರ ಪರ ಇರುವ ಪಕ್ಷ:ದೇಶದ ಮಾಜಿ ಪ್ರಧಾನಿಇಂದಿರಾಗಾಂಧಿ ಅವರು ಎಲ್ಲರಿಗೂ ಗೊತ್ತಿದೆ. ಈ ದೇಶದ ಮಹಾನ್ ಶಕ್ತಿ ಇಂದಿರಾಗಾಂಧಿ. ಅವರ ಆಡಳಿತದಲ್ಲಿ ಜನ ಪರ ಕೆಲಸಗಳನ್ನು ಮಾಡಿದ್ದರು. ಅವರ ಕೆಲಸವನ್ನು ಇವತ್ತು ಮರೆಯಲು ಸಾಧ್ಯವಾಗುವುದಿಲ್ಲ, ಬಡವರಿಗಾಗಿ ರೆಷನ್ ಕಾರ್ಡ್ ಪದ್ಧತಿಯನ್ನು ತಂದಿದ್ದು ಇಂದಿರಾ ಗಾಂಧಿಯವರು ಮತ್ತು ಉಳುವವನೇ ಭೂಮಿ ಒಡೆಯ ಕಾರ್ಯಕ್ರಮ ಕೊಟ್ಟಿದ್ದು ಕಾಂಗ್ರೆಸ್ ಪಕ್ಷದ ದೇವರಾಜ್ ಅರಸು ಅವರು, ಇಂದಿರಾಗಾಂಧಿ ಇದ್ದಿದ್ದರೇ ಬಡವರನ್ನು ಎದ್ದೇಳಿಸುತ್ತಿದ್ದರು. ಮಹಿಳೆಯರ ರಕ್ಷಣೆ ಮಾಡುವ ಕಾಂಗ್ರೆಸ್ಗೆ ಆಶೀರ್ವಾದ ಮಾಡಿ ಎಂದು ಉಮಾಶ್ರೀ ಅವರು ಮನವಿ ಮಾಡಿದರು.