ಮಂಡ್ಯ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಂಡ್ಯದ ಆಲೆಮನೆಗೆ ಮಾಜಿ ಸಚಿವ ಆರ್ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ, ಆರ್ ಅಶೋಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಂಡ್ಯದ ಹಾಡ್ಯ ಗ್ರಾಮದ ಬಳಿ ಇರುವ ಆಲೆಮನೆಗೆ ಅಶೋಕ್ ಭೇಟಿ ನೀಡಿದಾಗ ಎಂದಿನಂತೆ ಕಾರ್ಯನಿರ್ವಹಿಸುತ್ತಿತ್ತು. ಈ ವೇಳೆ, ಡಿಹೆಚ್ಓ ಡಾ ಮೋಹನ್ ಅವರಲ್ಲಿ ಯಾಕೆ ಆಲೆಮನೆ ಸೀಜ್ ಮಾಡಿಲ್ಲ ಎಂದು ಗರಂ ಆದರು.
ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಅಶೋಕ್, ಭ್ರೂಣ ಲಿಂಗ ಪತ್ತೆ ನಡೆಯುತ್ತಿದ್ದ ಜಾಗಕ್ಕೆ ಭೇಟಿ ನೀಡಿದ್ದೇನೆ. ಆಲೆಮನೆ ಯಥಾಪ್ರಕಾರ ಕಾರ್ಯ ನಿರ್ವಹಿಸುತ್ತಿದೆ. ಸ್ಥಳ ಮಹಜರು ಮಾಡಿ ಸರ್ಕಾರ ಸೀಲ್ ಹಾಕಬೇಕಿತ್ತು. ಆದರೆ, ಈ ಜಾಗದಲ್ಲಿ ಯಾವ ಕ್ರಮವೂ ಕೈಗೊಂಡಿಲ್ಲ. ಸಾಕ್ಷಿಗಳು ಇಲ್ಲಿ ನಾಶ ಆಗಿದೆ. ನ್ಯಾಯಾಲಯಕ್ಕೆ ಬೇಕಾದ ಸಾಕ್ಷಿಗಳು ಇನ್ನು ಇಲ್ಲಿ ಲಭ್ಯವಾಗಲ್ಲ. ಇದರಿಂದ ಪೊಲೀಸರ ನಿರ್ಲಕ್ಷ್ಯ ಸ್ಪಷ್ಟವಾಗಿದೆ. ಕೃತ್ಯಕ್ಕೆ ಬಳಸಿರುವ ಯಾವುದೇ ವಸ್ತು ಇಲ್ಲಿ ಇಲ್ಲ. ಎಲ್ಲವನ್ನೂ ಸ್ವಚ್ಛಗೊಳಿಸಿದ್ದಾರೆ. ಇಲ್ಲಿ ವೈದ್ಯರು ಭ್ರೂಣ ಹತ್ಯೆ ಮಾಡ್ತಿದ್ರು. ಇದರ ಹಿಂದೆ ವ್ಯವಸ್ಥಿತವಾದ ಜಾಲ ಇದೆ ಎಂದು ಹೇಳಿದರು.
ಈ ಘಟನೆ ರಾಜ್ಯಾದ್ಯಂತ ಸುದ್ದಿಯಾಗಿದ್ದರೂ ಆಲೆಮನೆ ಸೀಜ್ ಆಗಿಲ್ಲ. ಹೀಗಾದರೆ ಜನಗಳಿಗೆ ಹೇಗೆ ನಂಬಿಕೆ ಬರುತ್ತದೆ. ಸರ್ಕಾರವು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ತೀವಿ ಅಂತಾರೆ. ಕ್ರಮ ಆಗಿದ್ರೆ ಹೊಸಕೋಟೆಯಲ್ಲಿ ಯಾಕೆ ನಡೆಯುತ್ತಿತ್ತು? ಸರ್ಕಾರದ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ. ಕೃತ್ಯ ಬೆಳಕಿಗೆ ಬಂದ ಮೇಲೆ ಸರ್ಕಾರ ಏನು ಕ್ರಮ ಕೈಗೊಂಡಿಲ್ಲ. ಆರೋಗ್ಯ ಇಲಾಖೆಯವರು ನಮಗೂ ಇದಕ್ಕೂ ಸಂಬಂಧ ಇಲ್ಲ ಅಂತಾರೆ. ಅಧಿಕಾರಿಗಳು, ಸರ್ಕಾರದ ನಿರ್ಲಕ್ಷ್ಯ ಸ್ಪಷ್ಟವಾಗಿದೆ. ವಿರೋಧ ಪಕ್ಷದ ನಾಯಕನಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡ್ತೀನಿ ಎಂದರು.