ನಾನು ಚುನಾವಣೆ ಮಾಡೋದರಲ್ಲಿ ಪಿಹೆಚ್ಡಿ ಮಾಡಿದ್ದೇನೆ : ಶಾಸಕ ಸಿ.ಎಸ್ ಪುಟ್ಟರಾಜು ಮಂಡ್ಯ :ರಾಜಕೀಯದಲ್ಲಿನನಗೆ 40 ವರ್ಷ ಸರ್ವಿಸ್ ಆಗಿದ್ದು, ಚುನಾವಣೆ ಮಾಡುವುದರಲ್ಲಿ ಪಿಹೆಚ್ಡಿ ಆಗಿದೆ ಎಂದು ಮಂಡ್ಯದಲ್ಲಿ ಮಾಜಿ ಸಚಿವ ಮೇಲುಕೋಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು ತಿಳಿಸಿದ್ದಾರೆ. ದೇಶದಲ್ಲಿ ಒಂದೇ ಅವಧಿಯಲ್ಲಿ ಯಾರಾದರೂ ಒಬ್ಬ ಎರಡು ಅಸೆಂಬ್ಲಿ, ಮತ್ತು ಎರಡು ಎಂಪಿ ಚುನಾವಣೆ ಮಾಡಿರೋ ಗಂಡು ಇದ್ದರೇ ಅದು ಪುಟ್ಟರಾಜು ಒಬ್ಬನೇ ಎಂದು ಹೆಮ್ಮೆಯಿಂದ ಹೇಳಿಕೊಂಡರು.
ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರೈತ ಸಂಘಕ್ಕೆ ಸೋಲಿನ ಹತಾಶೆ ಎದುರಾಗಿದೆ. ನಾನು ಸೋಲು-ಗೆಲುವು ನೋಡಿಕೊಂಡು ಬಂದಿದ್ದು ನನಗೆ ಭಯನೇ ಇಲ್ಲ. ಈ ಚುನಾವಣೆಯಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಕ್ಕೆ ಅತ್ಯಂತ ಬಹುಮತದಲ್ಲಿ ನನಗೆ ಗೆಲುವು ಸಿಗುತ್ತೆ. ಈಗಾಗಲೇ ಮತದಾದರ ತೀರ್ಮಾನ ಬೂತ್ನಲ್ಲಿದೆ ಎಂದರು.
ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಪ್ರಚಂಡ ಬಹುಮತ ಪಡೆದ ಗೆಲ್ಲುತ್ತಾರೆ. ಜಿಲ್ಲೆಯಲ್ಲಿ ಶಾಂತಿಯುತವಾಗಿ ಚುನಾಚವಣೆ ನಡೆದಿದ್ದಕ್ಕೆ ಪಕ್ಷದ ಮುಖಂಡರಯ, ಕಾರ್ಯತರಿಗೆ ಕೃತಜ್ಞತೆ ತಿಳಿಸುತ್ತೇನೆ. ಕಳೆದ ಬಾರಿಯೂ ಹಲವು ಸಮೀಕ್ಷೆಗಳು ಜೆಡಿಎಸ್ ಲೆಕ್ಕಕ್ಕೆ ಇಲ್ಲ ಎಂದು ಹೇಳುತ್ತಿದ್ದವು. ಆದರೇ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಪಂಚರತ್ನ ಪ್ರವಾಸ ನಮಗೆ ಶಕ್ತಿ ನೀಡಿದೆ ಎಂದು ಸಿ.ಎಸ್ ಪುಟ್ಟರಾಜು ವಿಶ್ವಾಸ ವ್ಯಕ್ತಪಡಿಸಿದರು.
ದೇವೇಗೌಡರು ಚುನಾವಣೆ ಪ್ರಚಾರ ಮಾಡಿರುವುದು ನಮಗೆ ಬಲ ತಂದಿದ್ದು, ರಾಜ್ಯದಲ್ಲೂ ಹೆಚ್ಚಿನ ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ಅತಂತ್ರ ಬರುವ ಪ್ರಶ್ನೆ ನಮ್ಮ ಮುಂದೆ ಇಲ್ಲ. ಒಂದು ವೇಳೆ ಅತಂತ್ರ ಬಂದರೆ ನಮ್ಮ ನಾಯಕರು ತೀರ್ಮಾನ ಮಾಡುತ್ತಾರೆ. ಸ್ವತಂತ್ರ ಸರ್ಕಾರ ಬರಲು ನಾವು ಚುನಾವಣೆ ಮಾಡಿದ್ದೇವೆ ಎಂದು ಸಿ. ಎಸ್ ಪುಟ್ಟರಾಜು ತಿಳಿಸಿದರು.
ಮೇಲುಕೋಟೆ ಕ್ಷೇತ್ರದ ನಾರಾಯಣಪುರದಲ್ಲಿ ನಿನ್ನೆ ನಡೆದ ಗಲಾಟೆ ವಿಚಾರವಾಗಿ ಮಾತನಾಡಿದ ಸಿ.ಎಸ್ ಪುಟ್ಟರಾಜು ಅವರು, ನಾಲ್ಕು ವರ್ಷದ ಹಿಂದೆ ಕೆ. ಆರ್. ಪೇಟೆ ಕ್ಷೇತ್ರದಲ್ಲಿ ಮರ್ಡರ್ ಆಗಿತ್ತು. ಆ ಮರ್ಡರ್ನಲ್ಲಿ ರಘು ಎಂಬಾತ ಭಾಗಿಯಾಗಿದ್ದ. ಆ ರಘು ಎಂಬಾತನೆ ನಿನ್ನೆ ನಮ್ಮ ಕಾರ್ಯಕರ್ತನ ಮೇಲೆ ಹಲ್ಲೆ ಮಾಡುತ್ತಿದ್ದ. ಈ ವೇಳೆ ನಾನು ಹಾಗೂ ನನ್ನ ಗನ್ ಮ್ಯಾನ್ ಗಲಾಟೆ ಬಿಡಿಸಿದೆವು. ಬಳಿಕ ಆತನನ್ನು ಪೊಲೀಸರ ವಶಕ್ಕೆ ನೀಡಿದ್ದೆವು ಎಂದು ಹೇಳಿದ್ರು.
ದಿವಗಂತ ಮಾಜಿ ಸಚಿವ ಪುಟ್ಟಣ್ಣಯ್ಯ ಕಾಲದಿಂದ ನಾವು ಸ್ಫೂರ್ತಿದಾಯಕವಾಗಿ ಚುನಾವಣೆ ಮಾಡುತ್ತಿದ್ದು, ಅವರ ಮಗ ದರ್ಶನ್ ಪುಟ್ಟಣ್ಣಯ್ಯ ಮನುಷ್ಯ ಒಳ್ಳೆಯವನು ಎಂಬುದು ನನ್ನ ಭಾವನೆ. ಆದರೇ ದರ್ಶನ್ ಅಕ್ಕ-ಪಕ್ಕ ಇರೋರು ಅವರನ್ನು ದಾರಿ ತಪ್ಪಿಸುತ್ತಿದ್ದಾರೆ. ಜಿ. ಮಲ್ಲಿಗೆರೆ, ಚಿನಕುರುಳಿಗೆ ದರ್ಶನ್ ಬಂದಿದ್ದು, ಇಲ್ಲೂ ಸಹ ಗಲಾಟೆ ಮಾಡಲು ಯತ್ನಿಸಿದ್ದಾರೆ. ಬಳಿಕ ಪೊಲೀಸರು ಎಲ್ಲರನ್ನೂ ಹಿಂದಕ್ಕೆ ಕಳಿಸಿದ್ದಾರೆ. ಈ ರೀತಿಯ ನಡವಳಿಕೆಗಳು ನಡೆಯಬಾರದು. ರಾಜಕೀಯದಲ್ಲಿ ಸೋಲು ಗೆಲುವು ಸಹಜ. ಫಲಿತಾಂಶ ಬಂದ ಮೇಲೆ ಎಲ್ಲರೂ ಶಾಂತಿಯುತವಾಗಿ ಇರಬೇಕು. ದರ್ಶನ್ ಅವರು, ಅವರ ಮುಖಂಡರಿಗೆ ಕಿವಿಮಾತು ಹೇಳಬೇಕು ಎಂದು ಶಾಸಕ ಸಿ.ಎಸ್ ಪುಟ್ಟರಾಜು ಹೇಳಿದ್ರು.
ಇದನ್ನೂ ಓದಿ :ಸಿಂಗಾಪುರ್ಗೆ ತೆರಳಿದ ಹೆಚ್.ಡಿ.ಕುಮಾರಸ್ವಾಮಿ: ವಿಶ್ರಾಂತಿಗೆ ಜಾರಿದ ಜೆಡಿಎಸ್ ಅಭ್ಯರ್ಥಿಗಳು