ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿಂದು ಜೆಡಿಎಸ್ ಪಕ್ಷದ ನಾಯಕರು ಜಿಲ್ಲೆಯ ನಾಲ್ಕು ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದರು. ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್ ಮಂಜು ಪರ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡರು ಮತಯಾಚನೆ ಮಾಡಿದರು. ವೇದಿಕೆ ಮೇಲೆ ಮಾತನಾಡಿದ ಹೆಚ್.ಡಿ ದೇವೆಗೌಡರು, ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮಳವಳ್ಳಿ, ನಾಗಮಂಗಲ, ಶ್ರೀರಂಗಪಟ್ಟಣ, ಮಂಡ್ಯ ಕ್ಷೇತ್ರಗಳಲ್ಲಿ ನನ್ನ ಅಭ್ಯರ್ಥಿಗಳು ಗೆಲ್ಲಬೇಕು. ಮತ್ತೊಂದು ಬಾರಿ ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದರು.
ಇಡೀ ಹಿಂದೂಸ್ಥಾನದಲ್ಲಿ ಮುಸ್ಲಿಂರಿಗೆ ನಾನೇ ಮೀಸಲಾತಿ ಕೊಟ್ಟಿದ್ದೆ. ಮುಸ್ಲಿಂರು ಹೊಡೆಯುತ್ತಾರೆ ಎಂದು ಕಾಶ್ಮೀರಕ್ಕೆ ಯಾವುದೇ ಪ್ರಧಾನಮಂತ್ರಿ 10 ವರ್ಷ ಹೋಗಲಿಲ್ಲ. ನಾನು ಪ್ರಧಾನಿಯಾಗಿ ನಾಲ್ಕು ಬಾರಿ ಹೋಗಿದ್ದೆ. ನನ್ನನ್ನು ಯಾರು ಹೊಡಿಲಿಲ್ಲ. ನಾನು ಅವರನ್ನು ಪ್ರೀತಿಯಿಂದ ಗೆದ್ದೆ. ಈ ರೀತಿ ಮತ್ತೊಬ್ಬ ನಾಯಕನನ್ನು ತೋರಿಸಿ ಎಂದು ದೇವೇಗೌಡರು ಹೇಳಿದರು.
ಇದನ್ನೂ ಓದಿ :ಐತಿಹಾಸಿಕ ಪ್ರಸಿದ್ಧ ಬಸವನಗುಡಿ ಕ್ಷೇತ್ರದಲ್ಲಿ ಈ ಬಾರಿ ಕೈ- ತೆನೆ-ಕಮಲ ಪೈಪೋಟಿ ಪಕ್ಕಾ!.. ಹೀಗಿದೆ ನೋಡಿ ಕ್ಷೇತ್ರ ವಿವರ
ಜೆಡಿಎಸ್ ಪಕ್ಷವನ್ನು ಮುಗಿಸುತ್ತೇನೆ ಎಂದು ಕೆ.ಆರ್ ಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ನಾರಾಯಣಗೌಡ ಹೇಳಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ದೇವೇಗೌಡರು, ಈ ಹೇಳಿಕೆಯಿಂದ ನನ್ನ ರಕ್ತದ ಕಣ ಕಣ ಕುದಿಯುತ್ತಿದೆ. ಅವರು ಜೆಡಿಎಸ್ ಮುಗಿಸುವುದಕ್ಕೆ ಎಲ್ಲಿಂದ ಬಂದರು ಕೇಳಿ ಎಂದು ಕಿಡಿಕಾರಿದರು.