ಮಂಡ್ಯ: ಜಿಲ್ಲೆಯ ಕೆಆರ್‌ಪೇಟೆ ವ್ಯಾಪ್ತಿಯ ರೈತರಿಗೆ ನೀರು ಬಿಡಲಿಲ್ಲ ಎಂಬ ಆತಂಕವಿದ್ದರೂ ಕೋರಮಂಡಲ್ ಸಕ್ಕರೆ ಕಾರ್ಖಾನೆ ಪ್ರಾರಂಭವಾಗಿದ್ದು ಖುಷಿ ತಂದಿದೆ.
ಇಂದು ಕಬ್ಬು ಅರೆಯುವ ಕಾರ್ಯಕ್ಕೆ ಮಾಕವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆಗೆ ಚಾಲನೆ ನೀಡಲಾಗಿದೆ. ಕಾರ್ಖಾನೆ ಆರಂಭದಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ವಿಶೇಷ ಪೂಜೆ, ಹೋಮ-ಹವನ ನಡೆಸಿ ಕಬ್ಬು ಅರೆಯುವಿಕೆ ಕಾರ್ಯಕ್ಕೆ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ರವಿರೆಡ್ಡಿ ಚಾಲನೆ ನೀಡಿದರು. ಕಳೆದ ಸಾಲಿನಲ್ಲಿ ಏಳೂವರೆ ಲಕ್ಷ ಟನ್ ಕಬ್ಬು ಅರೆದು ಜಿಲ್ಲೆಯಲ್ಲಿ ದಾಖಲೆ ನಿರ್ಮಾಣ ಮಾಡಿದ್ದ ಕೋರಮಂಡಲ್ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಸಾಲಿನಲ್ಲಿ ಎಂಟು ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಿದೆ.
ಸರ್ಕಾರವು ನಿಗದಿಪಡಿಸುವ ಕಬ್ಬಿನ ದರವನ್ನು ನೀಡಲು ಕಾರ್ಖಾನೆಯ ಆಡಳಿತ ಮಂಡಳಿ ಬದ್ಧವಾಗಿದ್ದು, ಪ್ರತಿ ಟನ್ ಕಬ್ಬಿಗೆ ರೈತರಿಗೆ ಮುಂಗಡವಾಗಿ 2,300 ರೂಪಾಯಿ ನೀಡಲು ನಿರ್ಧರಿಸಿದೆ.