ಮಂಡ್ಯ/ಮೈಸೂರು:ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಇಂದು ಬೆಳಗ್ಗೆ ಭಾರಿ ಶಬ್ದದ ಜೊತೆ ಭೂಮಿ ಕಂಪಿಸಿದ ಅನುಭವವಾಗಿದ್ದು ಜನರು ಆತಂಕಗೊಂಡಿದ್ದಾರೆ. ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ, ಮಾದಾಪುರ, ಗೊಂದಿಹಳ್ಳಿ, ಚಿನ್ನೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭೂಕಂಪನವಾಗಿದೆ.
ಇಂದು ಬೆಳಗಿನ ಜಾವ 4.30ರ ಸುಮಾರಿಗೆ ಒಂದೆರಡು ನಿಮಿಷಗಳ ಕಾಲ ಭಾರಿ ನಿಗೂಢ ಶಬ್ದವೊಂದು ಕೇಳಿಸಿದ್ದು, ಭೂಮಿ ಕಂಪಿಸಿದ ಅನುಭವವಾಗಿದೆ. ಪರಿಣಾಮ ಆತಂಕಗೊಂಡ ಜನ ಮನೆ ಬಿಟ್ಟು ಹೊರಗೆ ಓಡಿಬಂದಿದ್ದಾರೆ.
ಸಾಲಿಗ್ರಾಮದಲ್ಲಿ ಭೂ ಕಂಪನ:ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆತಂಕಕ್ಕೀಡಾಗಿದ್ದಾರೆ. ಬೆಳಗಿನ ಜಾವ 4.15ರಲ್ಲಿ ಭೂಮಿಯಲ್ಲಿ ಭಾರೀ ಶಬ್ದ ಹಾಗೂ ಭೂಮಿ ಕಂಪಿಸಿದ ಅನುಭವವಾಗಿದೆ. ನಿದ್ರೆಯಲ್ಲಿದ್ದ ಜನ ಗಾಬರಿಯಿಂದ ಮನೆಯಿಂದ ಹೊರಬಂದಿದ್ದಾರೆ. ಭೂಮಿ ಕಂಪಿಸಿರುವುದನ್ನು ಇನ್ನೂ ಅಧಿಕಾರಿಗಳು ದೃಢಪಡಿಸಿಲ್ಲ. ಭೂಕಂಪನವೇ ಅಥವಾ ಬೇರೆ ಶಬ್ದವೇ ಎಂಬುದರ ಬಗ್ಗೆ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.