ನವದೆಹಲಿ/ಮಂಡ್ಯ:ರಾಜ್ಯದಲ್ಲಿ ಈ ಬಾರಿ ಮಳೆ ಇಲ್ಲದೆ ತೀವ್ರ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದೆ. ಮೈಸೂರು ಭಾಗದ ಜೀವನಾಡಿ ಕಾವೇರಿಯಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ. ಈ ನಡುವೆ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಮತ್ತೆ ಆಘಾತ ಎದುರಾಗಿದೆ. ತಮಿಳುನಾಡಿಗೆ ಪುನಃ ಕಾವೇರಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWRC) ಶಿಫಾರಸು ಮಾಡಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಇಂದು ನವದೆಹಲಿಯಲ್ಲಿ ಸಭೆ ನಡೆಸಿದ್ದು, ನ್ಯಾಯಾಧಿಕರಣ ಹಾಗೂ ಸುಪ್ರೀಂ ಕೋರ್ಟ್ ತೀರ್ಪು ಪಾಲನೆ ಮಾಡುವಂತೆ ತಿಳಿಸಿದೆ. ತಮಿಳುನಾಡಿಗೆ ನವೆಂಬರ್ 23 ರಿಂದ ಡಿಸೆಂಬರ್ 23ರ ವರೆಗೆ ಪ್ರತಿನಿತ್ಯ 2700 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಲಾಗಿದೆ.
ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಒಂದು ತಿಂಗಳ ಕಾಲ ಮತ್ತೆ 2700 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಶಿಫಾರಸ್ಸು ಮಾಡಿರುವುದನ್ನು ಕಾವೇರಿ ಹೋರಾಟಗಾರರು ವಿರೋಧಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ನಿರಂತರ ಧರಣಿ ನಡೆಸುತ್ತಿರುವ ರೈತರು ಸಮಿತಿಯ ಶಿಫಾರಸು ವಿರುದ್ಧ ಕಿಡಿಕಾರಿದ್ದಾರೆ.
ಧರಣಿಯಲ್ಲಿ ನಿರತರಾಗಿರುವ ಹೋರಾಟಗಾರರು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಹೆದ್ದಾರಿ ತಡೆ ನಡೆಸಿದರು. ಡಿ.23ರ ವರೆಗೆ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ಮಾಡಿರುವುದು ಕರ್ನಾಟಕದ ರೈತ ಸಮೂಹಕ್ಕೆ ಮಾಡಿದ ದ್ರೋಹವಾಗಿದೆ. ಅದೇ ರೀತಿ ನಾಯಾಧಿಕರಣ ಮತ್ತು ಸುಪ್ರೀಂ ಕೋರ್ಟ್ನ ಅಂತಿಮ ತೀರ್ಪು ಪಾಲಿಸುವಂತೆ ಸೂಚಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮತ್ತೆ ಮತ್ತೆ ನೀರು ಬಿಡಲು ಏಕಪಕ್ಷೀಯವಾಗಿ ಆದೇಶ ಮಾಡುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಜಲಾಶಯಗಳಲ್ಲಿನ ನೀರಿನ ಲಭ್ಯತೆ ಬಗ್ಗೆ ಪರಿಶೀಲಿಸದೆ ಕಳೆದ ಮೂರು ತಿಂಗಳಿಂದ ನೀರು ಬಿಡಿ ಎನ್ನುತ್ತಿರುವುದು ಕರ್ನಾಟಕದ ಮೇಲಿನ ಗದಾ ಪ್ರಹಾರವಾಗಿದೆ ಎಂದು ಹೇಳಿದ್ದಾರೆ.