ಮಂಡ್ಯ :2 ವರ್ಷದಿಂದ ಬಗೆಹರಿಯದ ವಿಕಲಾಂಗ ಚೇತನನ ಆಧಾರ್ ಕಾರ್ಡ್ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ನಿವಾರಿಸಿದ್ದಾರೆ. ಮಂಡ್ಯದ ತಂಡಸನಹಳ್ಳಿ ಗ್ರಾಮದ ನೂತನ್ (26) ಹುಟ್ಟುತ್ತಲೇ ಅಂಗವಿಕಲತೆ ಹಾಗೂ ವಿಚಿತ್ರ ಚರ್ಮ ರೋಗದಿಂದ ಬಳಲುತ್ತಿದ್ದಾರೆ.
ಆಧಾರ್ ಸಮಸ್ಯೆ ಬಗ್ಗೆ ಮಾಹಿತಿ ಹಂಚಿಕೊಂಡ ವಿಕಲಚೇತನ ನೂತನ್ ಮತ್ತು ರೈತ ಮುಖಂಡ ಮಧು ಚಂದನ್.. ಮೊದಲು ನೂತನ್ ಅವರ ಭಾವಚಿತ್ರದ ಆಧಾರದ ಮೇಲೆ ಅವರಿಗೆ ಅಧಿಕಾರಿಗಳು ಆಧಾರ್ ಕಾರ್ಡ್ ಮಾಡಿಕೊಟ್ಟಿದ್ದರು. ಆಗಿನಿಂದಲೂ ಅವರಿಗೆ ಪಿಂಚಣಿ ಹಣ ಸೇರಿ ಸರ್ಕಾರಿ ಸವಲತ್ತುಗಳು ದೊರೆಯುತ್ತಿದ್ದವು. ಆದರೆ, ಕಳೆದ ಎರಡೂವರೆ ವರ್ಷದ ಹಿಂದೆ ಇವರಿಗೆ ಬರುತ್ತಿದ್ದ ಪಿಂಚಣಿ ಹಾಗೂ ಸರ್ಕಾರಿ ಸವಲತ್ತುಗಳು ನಿಂತಿದ್ದವು.
ಈ ಬಗ್ಗೆ ವಿಚಾರಿಸಿದಾಗ, ನಿಮ್ಮ ಆಧಾರ್ ಕಾರ್ಡ್ ಬ್ಲಾಕ್ ಆಗಿದೆ. ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಿಸುವಂತೆ ಅಧಿಕಾರಿಗಳು ಹೇಳಿದ್ದರು. ಅದರಂತೆ ನೂತನ್ ಹಾಗೂ ಕುಟುಂಬಸ್ಥರು ಆಧಾರ್ ಕಾರ್ಡ್ ಕಚೇರಿಗೆ ಹೋಗಿದ್ದಾರೆ. ಅಲ್ಲಿ ನೂತನ್ ಅವರ ಹೆಬ್ಬೆರಳು, ಕಣ್ಣುಗಳ ಸ್ಕ್ಯಾನ್ ತೆಗೆದುಕೊಳ್ಳುತ್ತಿರಲಿಲ್ಲ. ಕಚೇರಿಯವರು ಇದು ಸಾಧ್ಯವಿಲ್ಲ ಎಂದು ಹೇಳಿ ಕಳುಹಿಸಿದ್ದರು.
ಓದಿ:ಪ್ರಧಾನಿ ಯುಪಿ ಪ್ರವಾಸ: ₹ 80,000 ಕೋಟಿ ವೆಚ್ಚದ 1,406 ಯೋಜನೆಗಳಿಗೆ ನಮೋ ಶಂಕು ಸ್ಥಾಪನೆ
ಎರಡು ವರ್ಷದ ಹಿಂದಿನಿಂದಲೂ ಈ ಸಮಸ್ಯೆಯಿತ್ತು. ನಾನು ಯಾವುದೇ ಸರ್ಕಾರಿ ಸವಲತ್ತು ಪಡೆಯಬೇಕಾದ್ರೆ ಆಧಾರ್ ಕಾರ್ಡ್ ಮುಖ್ಯವಾಗಿತ್ತು. ಹೀಗಾಗಿ, ಎರಡೂವರೆ ವರ್ಷದ ಹಿಂದಿನಿಂದಲೂ ಪಿಂಚಣಿ ನಿಂತಿದೆ. ಈ ಬಗ್ಗೆ ವಿಚಾರಿಸಿದಾಗ ನಿಮ್ಮ ಆಧಾರ್ ಕಾರ್ಡ್ ಲಾಕ್ ಆಗಿದೆ. ಥಂಬ್ ಮತ್ತು ಕಣ್ಣು ಸ್ಕ್ಯಾನಿಂಗ್ ಸಮಸ್ಯೆಯಿಂದಾಗಿ ನಿಮ್ಮ ಆಧಾರ್ ಅಪ್‌ಡೇಟ್ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು.
ಈ ಬಗ್ಗೆ ಮಂಡ್ಯ ಸಂಸದೆ ಸುಮಾಲತಾ ಮೇಡಂ, ಜಿಲ್ಲಾಧಿಕಾರಿ ಸೇರಿದಂತೆ ಹಲವರನ್ನು ಭೇಟಿ ಮಾಡಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ಬೇಸತ್ತು ಹೋಗಿದ್ದೆ. ಬಳಿಕ ಕೆಲವರು ರೈತ ಮುಖಂಡ ಮಧುಚಂದನ್ರನ್ನು ಭೇಟಿ ಆಗುವಂತೆ ಸಲಹೆ ನೀಡಿದ್ರು. ಅವರು ಎರಡೇ ದಿನದಲ್ಲಿ ನಮ್ಮ ಸಮಸ್ಯೆಯನ್ನು ಬಗೆ ಹರಿಸಿಕೊಟ್ಟರು. ಅವರಿಗೆ ನಮ್ಮ ಕಡೆಯಿಂದ ಧನ್ಯವಾದಗಳು ಎಂದು ನೂತನ್ ಹೇಳಿದ್ದಾರೆ.
ನೂತನ್ ಆಧಾರ್ ಕಾರ್ಡ್ ಸಮಸ್ಯೆಯನ್ನ ನಮ್ಮ ಬಳಿ ಹೇಳಿದ್ದರು. ಎರಡು ವರ್ಷದಿಂದ ಅಲೆದ್ರೂ ಪ್ರಯೋಜನವಾಗಿರಲಿಲ್ಲ. ಬಳಿಕ ಇವರು ನಮ್ಮ ಸಂಪರ್ಕಕ್ಕೆ ಬಂದಿದ್ದರು. ಕೂಡಲೇ ನಾನು ಈ ಸಮಸ್ಯೆ ಬಗ್ಗೆ ಪಿಎಂಒ ಆಫೀಸ್ ಮತ್ತು ಪ್ರಧಾನಿ ಮೋದಿಗೆ ಟ್ವೀಟ್ ಮಾಡಿದೆ. ಅವರು ಎರಡೇ ದಿನಕ್ಕೆ ನೂತನ್ ಆಧಾರ್ ಸಮಸ್ಯೆಯನ್ನು ಬಗೆಹರಿಸಿದರು ಎಂದು ರೈತ ಮುಖಂಡ ಮಧು ಚಂದನ್ ಹೇಳಿದ್ದಾರೆ.