ಕೊಪ್ಪಳ: ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಹೆಚ್ಚಾಗಿರುವುದಕ್ಕೆ ತಾಂಡಾವೊಂದರ ಮಹಿಳೆಯರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಉದ್ಯೋಗ ಖಾತ್ರಿ ಕೂಲಿ ಹಣ ಹೆಚ್ಚಳ: ಸಂತಸ ವ್ಯಕ್ತಪಡಿಸಿದ ಮಹಿಳೆಯರು
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಗೌರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತಾಂಡಾದ ಮಹಿಳೆಯರು ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಹೆಚ್ಚಳ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವವರಿಗೆ ದಿನಕ್ಕೆ 275 ರೂಪಾಯಿ ನೀಡಲಾಗುತ್ತಿತ್ತು. ಇದೀಗ ಕೂಲಿ ಹೆಚ್ಚು ಮಾಡಲಾಗಿದ್ದು, 289 ರೂ. ನಿಗದಿ ಮಾಡಲಾಗಿದೆ. ಕೂಲಿ ಹೆಚ್ಚಳ ವಿಷಯ ತಿಳಿದು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಗೌರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತಾಂಡಾದ ಮಹಿಳೆಯರು ಸೇವಾಲಾಲ್ ಗೀತೆ ಹಾಡಿ, ಪರಸ್ಪರ ಸಿಹಿ ಹಂಚಿ ಜಾಬ್ ಕಾರ್ಡ್ ಹಿಡಿದು ಸಂಭ್ರಮಿಸಿದರು.
ನಾವು ಮಂಡ್ಯ, ಮೈಸೂರಿಗೆ ಕಬ್ಬು ಕಡಿಯುವುದಕ್ಕೆ ಹೋಗುತ್ತಿದ್ದೆವು. ಕೂಲಿ ಹೆಚ್ಚಳ ಆಡಿರುವುದರಿಂದ ನಾವು ನಮ್ಮೂರಿನಲ್ಲಿಯೇ ಕೆಲಸ ಮಾಡಲು ಅನುಕೂಲ ಆಗುತ್ತದೆ. ಹೆಚ್ಚು ದಿನ ನಮ್ಮ ಊರಿನಲ್ಲೇ ಕೆಲಸ ಕೊಟ್ಟರೆ ಹೊಲ, ಮನೆ, ಮಕ್ಕಳನ್ನು ನೋಡಿಕೊಳ್ಳುತ್ತಾ ನಾವು ಇಲ್ಲೇ ಇದ್ದು ಬಿಡ್ತಿವಿ ಎಂದು ಲಂಬಾಣಿ ಸಮುದಾಯದ ಮಹಿಳೆಯರು ಕೂಲಿ ಹಣ ಹೆಚ್ಚಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.