ಗಂಗಾವತಿ: ಟಿಕ್ಟಾಕ್ನಲ್ಲಿ ಪರಿಚಯವಾದ ಹುಡುಗನನ್ನು ಮದುವೆಯಾದ ಯುವತಿಯ ಬದುಕು ಕೇವಲ ಏಳು ತಿಂಗಳಲ್ಲೇ ದುರಂತ ಅಂತ್ಯ ಕಂಡಿದೆ. ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಸಣಾಪುರದಲ್ಲಿ ನಡೆದಿದೆ.
ಮೃತಳನ್ನು ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸಕೊಪ್ಪದ ಶಿಲ್ಪಾ ವಿಕ್ರಮ್ (22) ಎಂದು ಗುರುತಿಸಲಾಗಿದೆ. ಯುವತಿಯ ಸಾವಿಗೆ ಗಂಡ ವಿಕ್ರಮ್, ಮಾವ ದುರುಗಪ್ಪ, ಅಜ್ಜಿ ಹುಲಿಗೆಮ್ಮ ವರದಕ್ಷಿಣೆ ಕಿರಕುಳ ಕಾರಣ ಎಂದು ಮೃತಳ ತಂದೆ ಸಂತೋಷ್ ಪೀಟರ್ಪೌಲ್ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದಾರೆ.
ಯುವಕ ಮತ್ತು ಯುವತಿ ಕಳೆದ ಒಂದೂವರೆ ವರ್ಷದಿಂದ ಟಿಕ್ಟಾಕ್ನಲ್ಲಿ ಪರಿಚಯವಾಗಿದ್ದರು. ಪರಸ್ಪರ ಚಾಟಿಂಗ್ ಮೂಲಕ ಸ್ನೇಹ ಬೆಸೆದುಕೊಂಡಿದ್ದರಿಂದ ಇಬ್ಬರು ಪರಸ್ಪರ ಮೊಬೈಲ್ ನಂಬರ್ ಪಡೆದುಕೊಂಡಿದ್ದರು. ಕಳೆದ ವರ್ಷದ ಲಾಕ್ಡೌನ್ ಸಂದರ್ಭದಲ್ಲಿ ತನಗೆ ಬೇರೆ ಹುಡುಗನೊಂದಿಗೆ ಮನೆಯವರು ಮದುವೆ ಮಾಡುತ್ತಿದ್ದುದಾಗಿ ತಿಳಿಸಿದ ಶಿಲ್ಪಾ ತನ್ನನ್ನು ಕರೆದೊಯ್ಯುವಂತೆ ಕೋರಿದ್ದಳು.
ಇದಕ್ಕೆ ಹುಡುಗ ಸಮ್ಮತಿಸಿದ್ದ. ಆಕೆಯನ್ನು ಕರೆತಂದು ಕಳೆದ ಡಿಸೆಂಬರ್ನಲ್ಲಿ ಮದುವೆಯಾಗಿದ್ದ. ಆದರೆ, ಅನ್ಯ ಜಾತಿಯ ಯುವತಿಯನ್ನು ಮದುವೆಯಾಗಿದ್ದಕ್ಕೆ ಮನೆಯಲ್ಲಿ ಕಿರುಕುಳ ನೀಡುತ್ತಿದ್ದರು ಎನ್ನಲಾಗ್ತಿದೆ. ಇದು ಯುವತಿ ಸಾವಿಗೆ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಓದಿ:ಕಾಬೂಲ್ ಮೇಲೆ ಹಿಡಿತ ಸಾಧಿಸಲು ಟರ್ಕಿಗೆ ಪಾಕ್ ಸಾಥ್: ಭಾರತಕ್ಕೆ ಕಂಟಕವಾಗುತ್ತಾ ಈ ಸಂಬಂಧ!