ಗಂಗಾವತಿ/ದೇವನಹಳ್ಳಿ/ವಿಜಯಪುರ: ವಾಯುವಿಹಾರಕ್ಕೆ ಹೋದವರಿಗೆ ಆಕಾಶದಲ್ಲಿ ಟಾರ್ಚ್ ಮಾದರಿಯಲ್ಲಿ ವಿಶೇಷ ರೀತಿಯ ಪ್ರಕಾಶಮಾನವಾದ ಬೆಳಕು ಕಂಡು ಬಂದಿದೆ. ಇದೇ ರೀತಿಯ ಬೆಳಕು ರಾಜ್ಯದ ವಿವಿಧೆಡೆ ಕಾಣಿಸಿರುವ ಬಗ್ಗೆ ವರದಿಯಾಗಿದೆ.
ರಾಜ್ಯದ ವಿವಿಧೆಡೆ ಆಕಾಶದಲ್ಲಿ ಕಂಡುಬಂತು ವಿಚಿತ್ರ ಬೆಳಕು: ಜನರಲ್ಲಿ ಕುತೂಹಲ, ಆತಂಕ - ಆಕಾಶದಲ್ಲಿ ಅಚ್ಚರಿಯ ಬೆಳಕು
ಇಂದು ಬೆಳಗ್ಗೆ ವಾಯುವಿಹಾರಕ್ಕೆ ಹೋದವರಿಗೆ ಆಕಾಶದಲ್ಲಿ ವಿಚಿತ್ರವಾದ ಬೆಳಕು ಕಂಡು ಬಂದಿದ್ದು ಕುತೂಹಲ ಮತ್ತು ಆತಂಕಕ್ಕೂ ಕಾರಣವಾಗಿದೆ.
ಗಂಗಾವತಿಯ ಜಯನಗರ ಸಮೀಪದ ವಿದ್ಯಾಗಿರಿ ಬೆಟ್ಟಕ್ಕೆ ವಾಯುವಿಹಾರಕ್ಕೆ ಹೋದವರು ಬೆಳಗ್ಗೆ ಆರು ಗಂಟೆಯ ಸುಮಾರಿಗೆ ಆಗಸದಲ್ಲಿ ಈ ವಿಸ್ಮಯ ನೋಡಿದ್ದಾರೆ. ಮೊದಲಿಗೆ ಟಾರ್ಚ್ ಮಾದರಿಯಲ್ಲಿ ಬೆಳಕು ಒಂದು ರಂಧ್ರದಂತಹ ಕಿಂಡಿಯಿಂದ ಬರುವಂತೆ ಗೋಚರಿಸುತ್ತಿತ್ತು. ಬಳಿಕ ಅದು ಜಿಗ್‌ಜಾಗ್ ಮಾದರಿಗೆ ಜಾರಿತ್ತು. ಸುಮಾರು ನಾಲ್ಕೈದು ನಿಮಿಷ ಈ ದೃಶ್ಯ ಕಂಡುಬಂದಿದೆ ಎಂದು ವಾಯುವಿಹಾರಕ್ಕೆ ಬಂದಿದ್ದ ಯುವಕ ಚೇತನ್ ಮುದ್ಗಲ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೊಯಿರಾ ಗ್ರಾಮದಲ್ಲೂ ಕೂಡಾ ಆಕಾಶದಲ್ಲಿ ಅಪರೂಪದ ಬೆಳಕಿನ ರೂಪ ಕಂಡಿದ್ದು, ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ. ಹಾಗೆಯೇ, ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿಯೂ ಈ ವಿಸ್ಮಯ ಕಾಣ ಸಿಕ್ಕಿದೆ. ಇತರೆ ಹಲವೆಡೆ ಕೂಡಾ ನಿಗೂಢ ದೃಶ್ಯ ಕಂಡುಬಂದಿದ್ದು ಜನರನ್ನು ಚಕಿತಗೊಳಿಸಿದೆ.