ಕೊಪ್ಪಳ: ಕೊರೊನಾ ಸೋಂಕಿನ 2ನೇ ಅಲೆಯ ಭೀತಿಯಿಂದಾಗಿ ಹೇರಲಾಗಿದ್ದ ಲಾಕ್ಡೌನ್ ಸಂದರ್ಭವನ್ನು ಜನರು ಮನೆಯಲ್ಲಿದ್ದು, ನಾನಾ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ಕೆಲವರು ಈ ಸಮಯವನ್ನು ಸದ್ಬಳಕೆ ಮಾಡಿಕೊಂಡಿದ್ದು, ಅದರಂತೆ ಇಲ್ಲೊಬ್ಬ ಶಿಕ್ಷಕ, ಕಲಾವಿದ ಕಿನ್ನಾಳ ಕಲೆಗೆ ಮಾಡರ್ನ್ ಟಚ್ ನೀಡಿದ್ದಾರೆ. ಗ್ರಾಹಕರ ಅಭಿಲಾಷೆಗೆ ತಕ್ಕಂತೆ ಕಿನ್ನಾಳ ಕಲಾಕೃತಿಗಳನ್ನು ರಚಿಸಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಶಿಕ್ಷಕನ ವಿಭಿನ್ನ ಅಭಿರುಚಿ ಕಲಾವಿದ ಶ್ರೀನಿವಾಸ ಚಿತ್ರಗಾರ ಅವರು ಲಾಕ್ಡೌನ್ ಸಮಯದಲ್ಲಿ ಕುಟುಂಬದ ಪಾರಂಪರಿಕ ಕಿನ್ನಾಳ ಕಲಾಕೃತಿಗಳನ್ನು ರಚಿಸುವ ಮೂಲಕ ಸಮಯ ಸದ್ಬಳಕೆ ಮಾಡಿಕೊಂಡಿದ್ದಾರೆ. ಅದರಲ್ಲೂ ಕಿನ್ನಾಳ ಕಲೆಯ ಕಾಲಾಕೃತಿಗಳಿಗೆ ಆಧುನಿಕ ಸ್ಪರ್ಶ ನೀಡಿ ಕಲಾಕೃತಿಗಳನ್ನು ತಯಾರಿಸಿ ಗ್ರಾಹಕರಿಗೆ ನೀಡಿದ್ದಾರೆ.
ವಿಜಯಗನಗರ ಕಾಲದಿಂದಲೂ ಪ್ರಸಿದ್ಧ:
ವಿಜಯನಗರ ಕಾಲದಿಂದಲೂ ಪ್ರಸಿದ್ಧಿ ಪಡೆದಿರುವ ಚಿತ್ರಗಾರ ಕುಟುಂಬ ತಯಾರಿಸುವ ಕಲಾಕೃತಿಗಳು ಕಿನ್ನಾಳ ಕಲೆ ಎಂದೇ ಪ್ರಸಿದ್ಧಿ ಪಡೆದಿವೆ. ಕಟ್ಟಿಗೆಯಲ್ಲಿ ತಯಾರಿಸುವ ಪಾರಂಪರಿಕ ಕಲೆ ಈಗಲೂ ಜನಜನಿತ. ಮನೆಯ ಅಲಂಕಾರಿಕ ವಸ್ತುಗಳಿಗೆ ಕಿನ್ನಾಳ ಕಲೆಯ ಟಚ್ ನೀಡಲಾಗಿದ್ದು, ಮನೆಯಲ್ಲಿ ಬಳಸುವ ವಾಲ್ ಪ್ಲೇಟ್ಗಳು, ಟೀಪಾಯಿ, ಪೆನ್ ಸ್ಟ್ಯಾಂಡ್, ಮೊಬೈಲ್ ಸ್ಟ್ಯಾಂಡ್, ವಿಸಿಟಿಂಗ್ ಕಾರ್ಡ್ಸ್ ಸ್ಟ್ಯಾಂಡ್ ಸೇರಿದಂತೆ ಅನೇಕ ಕಲಾಕೃತಿಗಳನ್ನು ತಯಾರಿಸಿ ಮಾರಾಟ ಮಾಡಿದ್ದಾರೆ.
ಕಿನ್ನಾಳ ಕಲೆಗೆ ಆಧುನಿಕ ಸ್ಪರ್ಶ:
ಅಷ್ಟಭುಜಾಕೃತಿಯ ಕಲಾಕೃತಿಯ ಪ್ಲೇಟ್ವುಳ್ಳ ಟೀಪಾಯಿ ಅತ್ಯಂತ ಆಕರ್ಷಕವಾಗಿವೆ. ಲಾಕ್ಡೌನ್ ಸಂದರ್ಭದಲ್ಲಿ ಕುಟುಂಬದವರ ಸಹಾಯದೊಂದಿಗೆ ಶಿಕ್ಷಕ ಶ್ರೀನಿವಾಸ್ ಚಿತ್ರಗಾರ ಅವರು 100ಕ್ಕೂ ಅಧಿಕ ಕಿನ್ನಾಳ ಕಲೆಯ ವಾಲ್ಪ್ಲೇಟ್ ಸೇರಿದಂತೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ಒಂದಿಷ್ಟು ಮಾಡರ್ನ್ ಟಚ್ ನೀಡಿ ಕಿನ್ನಾಳ ಕಲೆಯ ಕಲಾಕೃತಿಗಳನ್ನು ತಯಾರಿಸಿದ್ದಾರೆ.
ಇದನ್ನೂ ಓದಿ:ಅನ್ನದಾತನ ಬದುಕು: 3 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಮಾಡಿ ಯಶ ಕಂಡ ರೈತ