ಕೊಪ್ಪಳ:ಪಿಎಸ್ಐ ನೇಮಕಾತಿ ಮಾಡಿಸಿಕೊಡುವುದಾಗಿ ಅಭ್ಯರ್ಥಿಯಿಂದ ಹಣ ಪಡೆಯಲಾಗಿದೆ. ಆದರೆ, ಮರಳಿ ನೀಡುವಲ್ಲಿ ವಿಳಂಬವಾಗಿರುವ ಕುರಿತು ಶಾಸಕರೊಬ್ಬರು ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಇದಕ್ಕೆ ಪ್ರತ್ರಿಕ್ರಿಯಿಸಿದ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸುಗೂರು, ಆಡಿಯೋದಲ್ಲಿರುವ ಧ್ವನಿ ನನ್ನದೇ ಎಂದು ಒಪ್ಪಿಕೊಂಡಿದ್ದಾರೆ.
ಆದರೆ, ಪ್ರಕರಣದ ಕುರಿತು ಮಧ್ಯಸ್ಥಿಕೆ ವಹಿಸಲು ನನ್ನೊಂದಿಗೆ ಮಾತನಾಡಿದರು. ನಾನು ಈ ಕುರಿತು ಬಗೆಹರಿಸುತ್ತೇನೆ ಎಂದು ಅವರಿಬ್ಬರ ವ್ಯವಹಾರದ ಮಧ್ಯಸ್ಥಿಕೆ ವಹಿಸಿದ್ದೇ ಅಷ್ಟೇ. ನಾನು ಯಾವುದೇ ಹಣವನ್ನುಪಡೆದಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ನನ್ನ ರಾಜಕೀಯ ಜೀವನಕ್ಕೆ ಕಳಂಕ ತರಲು ನನಗಾಗದವರು ಯಾರೋ ರೆಕಾರ್ಡ್ ಮಾಡಿ ಹರಿಬಿಟ್ಟಿದ್ದಾರೆ.
ನಾನು ಸರ್ಕಾರಕ್ಕೆ ಏಕೆ ಆ ಹಣ ಕೊಡಬೇಕು? ನಾನು ಹಾಗೆ ಹೇಳಿಲ್ಲ. ಇದು ಇಂದು - ನಿನ್ನೆಯದಲ್ಲ. ವರ್ಷಗಳ ಹಿಂದಿನಿಂದಲೂ ಈ ಕುರಿತು ಇಬ್ಬರ ನಡುವೆ ಮನಸ್ಥಾಪವಿತ್ತು. ಸಮಸ್ಯೆ ಪರಿಹರಿಸುವಂತೆ ನನ್ನನ್ನು ಕೇಳಿದ್ದರು. ಅದನ್ನೇ ಮಾತನಾಡಿರುವೆ. ಚುನಾವಣಾ ವರ್ಷವಿದ್ದು, ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಹೀಗಾಗಿ ಆಡಿಯೊ ಮತ್ತು ವಿಡಿಯೊ ವೈರಲ್ ಮಾಡುತ್ತಿದ್ದಾರೆ ಎಂದರು.