ಗಂಗಾವತಿ/ಕೊಪ್ಪಳ:ಭಾವೈಕ್ಯತೆ ಸಂಕೇತ ಮೊಹರಂ ಹಬ್ಬವನ್ನು ಕೊಪ್ಪಳ ಜಿಲ್ಲೆಯಲ್ಲಿ ಸಂಭ್ರಮದಿಂದ ಆಚರಿಸುತ್ತಿದ್ದ ವೇಳೆ ಆಸ್ತಿಕರ ನಂಬಿಕೆಯಂತೆ ಹಲವು ಪವಾಡಗಳಿಗೆ ಸಾಕ್ಷಿಯಾಗಿದೆ. ನಿನ್ನೆ ಖತಲ್ ರಾತ್ರಿಯಲ್ಲಿ ವಿವಿಧ ಗ್ರಾಮಗಳಲ್ಲಿ ಧಾರ್ಮಿಕ ವಿಶೇಷತೆಗಳು ಜರುಗಿದವು.
ಕೊಪ್ಪಳ ಕವಲೂರು ಗ್ರಾಮದಲ್ಲಿ ಮೊಹರಂ ಹಬ್ಬದ ನಿಮಿತ್ತ ಅಲಾಯಿ ದೇವರಿಗೆ ಆಂಜನೇಯ ಹೂ ನೀಡಿದ ಅಪರೂಪದ ಘಟನೆ ಶುಕ್ರವಾರ ರಾತ್ರಿ ಜರುಗಿದೆ. ನಿನ್ನೆ ಮೊಹರಂ ಹಬ್ಬದ ಖತ್ತಲ್ ರಾತ್ರಿ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಪ್ರತಿ ವರ್ಷ ಅಲಾಯಿ ದೇವರು ಹೋಗುತ್ತವೆ. ಮೆರವಣಿಗೆ ವೇಳೆ ಗ್ರಾಮದ ಆಂಜನೇಯ ದೇವಸ್ಥಾನದ ಗರ್ಭಗುಡಿಗೆ ಆಗಮಿಸಿದ ಅಲಾಯಿ ದೇವರು ಆಂಜನೇಯನಲ್ಲಿ ಹೂ ನೀಡುವಂತೆ ಕೇಳಿತು. ಕೆಲವೇ ಕ್ಷಣಗಳಲ್ಲಿ ಆಂಜನೇಯ ಮೂರ್ತಿ ಮೇಲಿಂದ ಹೂ ಕೆಳಗೆ ಬೀಳುತ್ತವೆ.
ದೇವರುಗಳ ಸೌಹಾರ್ದಕ್ಕೆ ಮೆಚ್ಚುಗೆ: ಕೊಪ್ಪಳದಲ್ಲಿ ನಡೆದ ದೇವರುಗಳ ಸೌಹಾರ್ದಕ್ಕೆ ಜನರಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಕವಲೂರು ಗ್ರಾಮದ ಹಜಿಮ್ ಸಾಬ್ ವ್ಯಕ್ತಿಯು ಅಲೈ ದೇವರ ಸವಾರಿ ಮಾಡುವನಾಗಿದ್ದನು. ಅಲಾಯಿ ದೇವರು ಹೊತ್ತ ಅಜೀಮ್ ಸಾಬ್ ಆಂಜನೇಯನ ಮುಂದೆ ಕುಳಿತು ಪ್ರಾರ್ಥಿಸಿದಾಗ ಆಂಜನೇಯ ಹೂ ಪ್ರಸಾದ ನೀಡುತ್ತಾನೆ. ಹಜಿಮ್ ಸಾಬ್ ಮುಸ್ಲಿಂ ಆಗಿದ್ದರೂ ಅಪ್ಪಟ ಆಂಜನೇಯನ ಭಕ್ತನಾಗಿದ್ದಾನೆ. ಹೀಗಾಗಿ ಆಂಜನೇಯ ಹೂ ನೀಡುವ ದೃಶ್ಯ ವೈರಲ್ ಆಗಿದೆ.
ಕಂಬಳಿ ಪವಾಡ:ಕೊಪ್ಪಳ ತಾಲೂಕಿನ ಬೋಚನಹಳ್ಳಿ ಗ್ರಾಮದಲ್ಲಿ ನಿಗಿ ನಿಗಿ ಕೆಂಡದ ಮೇಲೆ ಕಂಬಳಿ ಹಾಸಿ ಅದರ ಮೇಲೆ ಯುವಕನೊಬ್ಬ ಕುಣಿದಿದ್ದಾನೆ. ಬೋಚನಹಳ್ಳಿಯ ಅಲಾಯಿ ದೇವರ ಮುಂದಿನ ಅಲಾಯಿ ಕುಣಿಯಲ್ಲಿನ ನಿಗಿ ನಿಗಿ ಕೆಂಡದ ಮೇಲೆ ಬಸವರಾಜ ಮೆಣೆಗೇರ ಎಂಬುವವರು ಕಂಬಳಿ ಹಾಸಿ ಕುಣಿದಿದ್ದಾರೆ. ಕಂಬಳಿ ಪವಾಡದ ನಂತರ ಬಸವರಾಜ ದೇವರ ಹೊತ್ತುಕೊಳ್ಳುತ್ತಾರೆ. ವಿಶೇಷವಾಗಿ ಅಲಾಯಿ ದೇವರನ್ನು ಹಿಂದುಗಳೇ ಹೊರುವ ಪದ್ದತಿ ಇದೆ.