ಕುಷ್ಟಗಿ(ಕೊಪ್ಪಳ):ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಭಾರಿ ಅನುದಾನದ ಅವಶ್ಯಕತೆ ಇದೆ. ಈ ಹಿನ್ನೆಲೆ ಕೃಷ್ಣೆ-ತುಂಗಭದ್ರಾ ನದಿ ಜೋಡಣೆ ಸಾದ್ಯವೇ? ಎಂಬುವುದರ ಚಿಂತನೆ ಇದೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.
ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಬೆಟ್ಟದ ಅಭಿನವ ತಿರುಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆ ವೇಳೆ ಈ ವಿಚಾರ ಪ್ರಸ್ತಾಪಿಸಿದರು. ಕನಿಷ್ಠ 40 ಟಿಎಂಸಿ ನೀರನ್ನು ಕೃಷ್ಣೆಯಿಂದ ತುಂಗಭದ್ರೆಗೆ ಹರಿಸಲು ಕಡಿಮೆ ವೆಚ್ಚವಾಗಲಿದೆ ಎಂಬುದು ವರದಿಯಿಂದ ಗೊತ್ತಾಗಿದೆ. ಅದಕ್ಕಾಗಿ ಈ ಚಿಂತನೆ ನಡೆಸಲಾಗಿದೆ ಎಂದರು.
ಬಿಜೆಪಿ ಸೇರಲು ಕಾರಣ ಹೇಳಿದ ಕರಡಿ: ಸಿಂಘಟಾಲೂರು ಏತ ನೀರಾವರಿ ಯೋಜನೆ ಬೇಕಾಗಿ ಬಿಜೆಪಿಗೆ ಬಂದಿದ್ದೇನೆ. ಸದರಿ ಯೋಜನೆ 17 ಕಿ.ಮಿ. ಮುಖ್ಯ ಕಾಲುವೆ ಕಾಮಗಾರಿ ಕೆಲಸ ನಡೆದಿದೆ. ಆದರೆ, ಕಾಂಗ್ರೆಸ್ ಸರ್ಕಾರ ಇದ್ದಾಗ ಅಷ್ಟೇ ಕಿ.ಮೀ. ಮುಖ್ಯ ಕಾಲುವೆ ತೆಗೆಯುವ ಕೆಲಸ ಆಗಿದೆ. ಆದರೆ ಇಂದಿಗೂ ಸಿಂಗಟಾಲೂರು ಏತ ನೀರಾವರಿ ಕೆಲಸ ನನಸಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆ ನೀರಾವರಿ ಕೆಲಸ ನನಸು ಮಾಡಬೇಕಿದ್ದು, ಈ ಹಿನ್ನೆಲೆಯಲ್ಲಿ ಸಚಿವ ಹಾಲಪ್ಪ ಆಚಾರ್, ತಾವು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳಬೇಕಿದ್ದು, ಸದರಿ ಯೋಜನೆಗೆ ಹಣಕಾಸಿನ ತೊಂದರೆ ಇಲ್ಲ. ಸದರಿ ಯೋಜನೆ ಮುಂದುವರಿಸಿ ಪೂರ್ಣಗೊಳಿಸಬೇಕಿದೆ ಎಂದರು.
ಕೊಪ್ಪಳ ಏರಪೋರ್ಟ ವಿಳಂಬ: ವಿಜಯಪುರ, ರಾಯಚೂರು, ಶಿವಮೊಗ್ಗ, ಕಲಬುರಗಿಯಲ್ಲಿ ಏರಪೋರ್ಟ್ ಆಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ವಿಳಂಬವಾಗಿದೆ. ನಮ್ಮ ಸುದೈವಕ್ಕೆ ಕೆಕೆಆರ್ ಡಿಬಿ ಅಧ್ಯಕ್ಷರು, 100 ಕೋಟಿ ರೂ. ಬಿಡುಗಡೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಶೀಘ್ರದಲ್ಲಿ ಭೂಸ್ವಾಧೀನ ಮಾಡಿಸಿಕೊಟ್ಟರೆ ಕೇಂದ್ರ ಸರ್ಕಾರದಿಂದಲೂ ಅನುದಾನ ದೊರೆಯಲಿದೆ ಎಂದರು.