ಕರ್ನಾಟಕ

karnataka

ETV Bharat / state

ರಾಜ್ಯ ಸರ್ಕಾರದ ಕಾರ್ಯವೈಖರಿ ವಿರೋಧಿಸಿ ಸಂಸದ ಸಂಗಣ್ಣ ಕರಡಿ ಉಪವಾಸ ಸತ್ಯಾಗ್ರಹ - ಪ್ರಧಾನಿ ನರೇಂದ್ರ ಮೋದಿ

ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಕೊಪ್ಪಳ ಜಿಲ್ಲಾಡಳಿತ ಭವನದ ಮುಂದೆ ಸಂಸದ ಸಂಗಣ್ಣ ಕರಡಿ ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಸಂಸದ ಸಂಗಣ್ಣ ಕರಡಿ
ಸಂಸದ ಸಂಗಣ್ಣ ಕರಡಿ

By ETV Bharat Karnataka Team

Published : Nov 6, 2023, 4:10 PM IST

ಸಂಸದ ಸಂಗಣ್ಣ ಕರಡಿ

ಕೊಪ್ಪಳ :ರೈತರ ಕೃಷಿ ಪಂಪ್​ಸೆಟ್​ಗಳಿಗೆ ಪರಿವರ್ತಕ ಸಹಿತ ಉಚಿತ ಮೂಲಸೌಕರ್ಯ ಒದಗಿಸುವ ಯೋಜನೆ ರದ್ದುಪಡಿಸುವ ಆದೇಶ ಹಿಂಪಡೆಯಬೇಕು. ರೈತರ ಪಂಪ್​ಸೆಟ್​ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಕೊಪ್ಪಳ ಜಿಲ್ಲಾಡಳಿತ ಭವನದ ಮುಂದೆ ಸಂಸದ ಸಂಗಣ್ಣ ಕರಡಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ರೈತರು ಬದುಕೋದೆ ಕಷ್ಟವಾಗಿದೆ. ಅಂತಹದರಲ್ಲಿ ಸೆಪ್ಟೆಂಬರ್​​ 22ರಿಂದ ಬಂದ ರೈತರ ಅರ್ಜಿಗಳಿಗೆ ಪಂಪ್​ಸೆಟ್‌ ಸಲಕರಣೆ ಉಚಿತ ಕೊಡೋದಿಲ್ಲ ಅಂತ ರಾಜ್ಯ ಸರ್ಕಾರ ಆದೇಶ ಮಾಡಿದೆ. ಈ ಬಗ್ಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೇಳಿದರೆ ನನ್ನ ಗಮನಕ್ಕೆ ಇಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಈ ಆದೇಶವನ್ನು ಸರ್ಕಾರ ರದ್ದುಪಡಿಸಿ, ಹಿಂದಿನ ವ್ಯವಸ್ಥೆಯನ್ನು ಮುಂದುವರಿಸಬೇಕು. ಆದೇಶ ಮಾಡುವವರೆಗೂ ನನ್ನ ಉಪವಾಸ ಸತ್ಯಾಗ್ರಹ ಮುಂದುವರೆಯುತ್ತದೆ. ಹಗಲು ರಾತ್ರಿ ಉಪವಾಸ ಸತ್ಯಾಗ್ರಹ ಮುಂದುವರೆಸುತ್ತೇನೆ. ಆದೇಶ ರದ್ದುಪಡಿಸಿದರೆ ಮಾತ್ರ ಉಪವಾಸ ಸತ್ಯಾಗ್ರಹ ಕೈಬಿಡುತ್ತೇನೆ ಎಂದು ಅವರು ಹೇಳಿದರು.

ಇತ್ತೀಚಿಗೆ ಕೊಪ್ಪಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತ್ರಿಕ್ರಿಯಿಸಿ, ನಾನೊಬ್ಬ ಜನಪ್ರತಿನಿಧಿ, ಕೊಪ್ಪಳ ಜಿಲ್ಲೆಯಾಗಿ 26 ವರ್ಷವಾಗಿದೆ. ಕೊಪ್ಪಳದವರೊಬ್ಬರೂ ಮಂತ್ರಿಯಾಗುತ್ತಿಲ್ಲ. ಮಂತ್ರಿಯಾದರೆ ಕೊಪ್ಪಳ ಜಿಲ್ಲೆಯ ಅನೇಕ ಯೋಜನೆಗಳಿಗೆ ಚಾಲನೆ ಸಿಗುತ್ತಿದ್ದವು. ನ್ಯಾಯಾಲಯದ ಕಟ್ಟಡ ನಿರ್ಮಾಣ ವಿಚಾರದಲ್ಲಿ ನನಗೆ ಸಾಕಷ್ಟು ಮುಜುಗರವಾಗಿದೆ ಎಂದರು.

ಅಂದು ನಮ್ಮ ಸರ್ಕಾರವಿದ್ದರೂ ಹಣ ಕೊಡಲಿಲ್ಲ. ಆಗ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಸಿ ಸಿ ಪಾಟೀಲ್‌ ಅವರನ್ನೂ ಭೇಟಿ ಮಾಡಿದ್ದೆ. ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಮಾಡುತ್ತೇನೆ ಎಂದಿದ್ದರು. ಆದರೆ ಆಗಲಿಲ್ಲ. ಕೊನೆಗೆ ವಕೀಲರು ಪಿಐಎಲ್ ಹಾಕಿ ಯೋಜನೆಗೆ ಹಣ ಪಡೆಯಬೇಕಾಯಿತು. ಹಾಗಿದ್ದಾಗ ಆ ಕಾರ್ಯಕ್ರಮದಲ್ಲಿ ನಾವು ಭಾಗವಹಿಸಿದಾಗ ಇದನ್ನಲ್ಲದೆ ಬೇರೆ ಏನು ಮಾತಾಡಲಿಕ್ಕೆ ಇರಲಿಲ್ಲ. ಹಾಗಾಗಿ ನಾನು ಅಸಮಾಧಾನ ವ್ಯಕ್ತಪಡಿಸಿದ್ದೇನೆ ಅಷ್ಟೇ ಎಂದರು. ಹಾಗಂತ ನಾನು ಪಕ್ಷ ವಿರೋಧಿಯಲ್ಲ. ಈಗಿರುವ ಕಾಂಗ್ರೆಸ್ ಸರ್ಕಾರದ ಹಣೆಬರಹವೂ ಅಷ್ಟೆ.
ಅಭಿವೃದ್ಧಿ ವಿಚಾರದಲ್ಲಿ ನಮಗೆ ಸೌಲಭ್ಯಗಳು ಬೇಡವಾ? ಎಂದು ಪ್ರಶ್ನಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಮಾಡದವರು ಕಾಂಗ್ರೆಸ್ ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಹಿಂದೆ ಎಐಸಿಸಿ ಅಧ್ಯಕ್ಷರನ್ನೇ ಕಾಂಗ್ರೆಸ್‌ ಆಯ್ಕೆ ಮಾಡಿರಲಿಲ್ಲ. ಈಗ ನಮ್ಮ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗೇನಿದೆ? ಎಂದು ಮರು ಪ್ರಶ್ನೆ ಹಾಕಿದರು.

ಕರ್ನಾಟಕ ಕೊಳ್ಳೆ ಹೊಡೆಯುತ್ತಿದ್ದಾರೆ ಎಂಬ ಮೋದಿ ಹೇಳಿಕೆ ವಿಚಾರಕ್ಕೆ, ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರೋದು ನೂರಕ್ಕೆ ನೂರರಷ್ಟು ಸತ್ಯವಾದ ಮಾತು. ಕೊಳ್ಳೆ ಹೊಡೆಯಲೆಂದು ಅವರು ಸಿಎಂ ಕುರ್ಚಿಗಾಗಿ ಹೊಡೆದಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ :'ಪಕ್ಷದಿಂದ ಹೊರಬರಬೇಕೆಂದಿದ್ದೆ, ಒಮ್ಮೊಮ್ಮೆ ಗುಲಾಮಿತನ ಅನ್ನಿಸಿಬಿಡುತ್ತದೆ': ಬಿಜೆಪಿ ಸಂಸದ ಸಂಗಣ್ಣ ಕರಡಿ

ABOUT THE AUTHOR

...view details