ಕರ್ನಾಟಕ

karnataka

ETV Bharat / state

ಮಕರ ಸಂಕ್ರಮಣ ಆಚರಣೆ: ಅಂಜನಾದ್ರಿಗೆ ಭಕ್ತಸಾಗರ... ತುಂಗಭದ್ರೆಯಲ್ಲಿ ಮಿಂದೆದ್ದ ಜನ - makara sankranti

ಸಂಕ್ರಾಂತಿ ಹಬ್ಬದ ಪ್ರಯುಕ್ತ ಪುಣ್ಯಕ್ಷೇತ್ರಗಳಿಗೆ ಹರಿದು ಬಂದ ಭಕ್ತರು - ತುಂಗಭದ್ರ ನದಿಯಲ್ಲಿ ಮಿಂದೆದ್ದ ಭಕ್ತರು - ಹಬ್ಬದ ಅಂಗವಾಗಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ.

makara-sankramana-festival-celebration-crowded-tungabhadre-anjanadri
ಮಕರ ಸಂಕ್ರಮಣ ಹಬ್ಬ ಆಚರಣೆ: ತುಂಬಿದ ತುಂಗಭದ್ರೆ, ಅಂಜನಾದ್ರಿಗೆ ಜನಸಾಗರ

By

Published : Jan 15, 2023, 8:18 PM IST

ಗಂಗಾವತಿ: ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಸೂರ್ಯ ತನ್ನ ಪಥ ಬದಲಿಸುವ ಮತ್ತು ರೈತರು ಬೆಳೆದ ಬೆಳೆಗೆ ಪೂಜೆ ಮಾಡುವುದನ್ನು ಸುಗ್ಗಿ ಹಬ್ಬ ಎಂದು ಗುರುತಿಸಿಕೊಂಡಿರುವ ಮಕರ ಸಂಕ್ರಮಣ ಹಬ್ಬದ ಅಂಗವಾಗಿ ತಾಲೂಕಿನ ನಾನಾ ಧಾರ್ಮಿಕ ತಾಣಗಳು ಜನರಿಂದ ತುಂಬಿ ತುಳುಕಿದವು. ತಾಲೂಕಿನ ಚಿಕ್ಕಜಂತಕಲ್, ಕಂಪ್ಲಿ ಸೇತುವೆ, ವಿಪ್ರ, ಸಾಯಿನಗರ, ಆನೆಗೊಂದಿ, ಚಿಂತಾಮಣಿ, ಋಷಿಮುಖ ಪರ್ವತ, ಸಣಾಪುರ ಸೇರಿದಂತೆ ನಾನಾ ಗ್ರಾಮಗಳಿಂದ ಹರಿದು ಬರುವ ತುಂಗಭದ್ರಾ ನದಿಯಲ್ಲಿ ಮಕರ ಸಂಕ್ರಾಂತಿ ಹಬ್ಬದ ದಿನದಂದು ಜನ ಪುಣ್ಯ ಸ್ನಾನ ಮಾಡಿ ಪಾವನರಾದರು.

ಬಳಿಕ ಸಮೀಪದ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು. ನಂತರ ಸಮೀಪದ ನದಿ ದಂಡೆ, ಹುಲ್ಲುಹಾಸು, ಬಂಡೆಗಳ ಸಂದು ಹೀಗೆ ಪ್ರಾಕೃತಿಕವಾಗಿ ಪ್ರಶಾಂತ ವಾತಾವರಣವಿರುವ ಸ್ಥಳಗಳನ್ನು ಹುಡುಕಿ ಕುಟುಂಬಸ್ಥರು ಊಟ, ಉಪಹಾರ ಸೇವಿಸಿ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಿದರು. ಮುಖ್ಯವಾಗಿ ಮಕರ ಸಂಕ್ರಮಣದ ಅಂಗವಾಗಿ ಪ್ರಮುಖ ಜಿಲ್ಲೆಯ ಪ್ರಮುಖ ಧಾರ್ಮಿಕ ತಾಣವಾದ ಅಂಜನಾದ್ರಿಯಲ್ಲಿ ಜನಸಂದಣಿ ಅಧಿಕವಾಗಿತ್ತು.

ಬೆಳಗ್ಗೆ ಏಳು ಗಂಟೆಯಿಂದಲೇ ದೇಗುಲ ದರ್ಶನವನ್ನು ಜನರಿಗಾಗಿ ಮುಕ್ತಗೊಳಿಸಲಾಗಿತ್ತು. ಸಾವಿರಾರು ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ ಅಂಜನಾದ್ರಿ ಬೆಟ್ಟ ಏರಿ ದೇವರ ದರ್ಶನ ಪಡೆದರು. ಸಂಕ್ರಾಂತಿ ಹಬ್ಬದ ಅಂಗವಾಗಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಅಲ್ಲದೇ ಆಂಜನೇಯನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಹೆಚ್ಚುವರಿ ಬಸ್​ ವ್ಯವಸ್ಥೆ: ಆನೆಗೊಂದಿಯ ಚಿಂತಾಮಣಿ, ಶಿರಸಪ್ಪಯ್ಯನಮಠ, ನವ ವೃಂದಾವನ ಗಡ್ಡೆ, ಪಂಪಾ ಸರೋವರ, ಲಕ್ಷ್ಮಿದೇಗುಲ, ಸರಸ್ವತಿ ಪೀಠ, ಗಂಗಾವತಿಯ ದೇವಘಾಟ, ವಾಣಿ ವೀರಭದ್ರೇಶ್ವರ, ವಿರುಪಾಪುರಗಡ್ಡೆಯ ಅಚ್ಯುತಾಶ್ರಮ, ಋಷಿಮುಖ ಸೇರಿದಂತೆ ನಾನಾ ದೇವಸ್ಥಾನಗಳಲ್ಲಿ ಹಬ್ಬದ ಅಂಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಆಶೀರ್ವಾದ ಪಡೆದುಕೊಂಡರು. ಗಂಗಾವತಿಯ ಸಾರಿಗೆ ಇಲಾಖೆಯಿಂದ ಮಕರ ಸಂಕ್ರಮಣ ಹಬ್ಬದ ಹಿನ್ನೆಲೆ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಹೆಚ್ಚುವರಿ ಬಸ್​ಗಳ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ:ಗವಿಗಂಗಾಧರೇಶ್ವರನಿಗೆ ಸೂರ್ಯರಶ್ಮಿ ಸ್ಪರ್ಶ: ಐತಿಹಾಸಿಕ ಕ್ಷಣ ಕಣ್ತುಂಬಿಕೊಂಡ ಭಕ್ತರು

ಮನೆ ತಳಿರು ತೋರಣ, ಆಕರ್ಷಕ ರಂಗೋಲಿ: ಸೂರ್ಯ ತನ್ನ ಕಕ್ಷೆಯ ಪಥವನ್ನು ಬದಲಿಸುವ ಸಂದರ್ಭದಲ್ಲಿ ಹರಿಯುವ ನದಿ ತೊರೆಗಳಲ್ಲಿ ತೀರ್ಥಸ್ನಾನ ಮಾಡಿ ದೇವರ ದರ್ಶನ ಪಡೆದರೆ ಕಷ್ಟಗಳು ಪರಿಹಾರವಾಗಿ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ ಹಿನ್ನೆಲೆ ಜನ ನದಿಗಳಲ್ಲಿ ಸ್ನಾನ ಮಾಡುವ ಸಂಪ್ರದಾಯವಿದೆ. ಇನ್ನು ಸಂಕ್ರಮಣ ಹಬ್ಬದ ಅಂಗವಾಗಿ ಗ್ರಾಮೀಣ ಭಾಗದಲ್ಲಿ ಸುಗ್ಗಿ ಹಬ್ಬ ಆಚರಣೆ ಮಾಡಲಾಯಿತು. ಇನ್ನು ಸಂಕ್ರಮಣ ಹಬ್ಬದ ಅಂಗವಾಗಿ ಗ್ರಾಮೀಣ ಭಾಗಗಳಲ್ಲಿ ಬಹಳ ಅದ್ಧೂರಿಯಾಗಿ ಸುಗ್ಗಿ ಹಬ್ಬವನ್ನು ಆಚರಿಸುತ್ತಾರೆ. ಮನೆಗಳ ಮುಂದೆ ತಳಿರು ತೋರಣ ಮತ್ತು ಆಕರ್ಷಕ ರಂಗೋಲಿಗಳ ಚಿತ್ತಾರ ಕಂಡು ಬಂದವು.

ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿ ಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಕರೆಯುತ್ತಾರೆ. ಸೌರಮಂಡಲದ ಪ್ರಕಾರ ಸೂರ್ಯನು ಹನ್ನೆರಡು ರಾಶಿಗಳನ್ನು ಪ್ರವೇಶಿಸುವಾಗಲೂ ಸಂಕ್ರಾಂತಿ ಬರುತ್ತದೆ. ಆದರೆ ಅವುಗಳಲ್ಲಿ ಕರ್ಕಾಟಕ ಸಂಕ್ರಾಂತಿ ಹಾಗೂ ಮಕರ ಸಂಕ್ರಾತಿಗಳು ದಕ್ಷಿಣಾಯನ, ಉತ್ತರಾಯಣಗಳ ಪ್ರಾರಂಭದ ದಿನಗಳಾದ್ದರಿಂದ ವಿಶೇಷ ಮಹತ್ವವನ್ನು ಹೊಂದಿದೆ.

ಇದನ್ನೂ ಓದಿ:ಎರಡನೇ ಶಬರಿಮಲೆ ಎಂಬ ಖ್ಯಾತಿಯ ಬೆಜ್ಜವಳ್ಳಿಯ ಅಯ್ಯಪ್ಪ ಸ್ವಾಮಿ ಜಾತ್ರಾ ಮಹೋತ್ಸವ

ABOUT THE AUTHOR

...view details