ಕುಷ್ಟಗಿ(ಕೊಪ್ಪಳ): ಸಕಾಲದಲ್ಲಿ ಮಳೆಯಾದರೆ ರೈತನ ಬದುಕು ಹಸನಾಗುತ್ತದೆ ನಿಜ, ಆದರೆ, ಸಕಾಲದಲ್ಲಿ ಮಳೆಯಾಗದಿದ್ದರೆ ರೈತರ ಪಾಡು ಮತ್ತೆ ಇಕ್ಕಟ್ಟಿಗೆ ಸಿಲುಕಿದಂತೆಯೇ. ಪ್ರಸಕ್ತ ಮುಂಗಾರು ಆರಂಭದಲ್ಲಿ ಮಳೆಗೆ ಹೆಸರು ಬಿತ್ತನೆ ನಂತರ ಉತ್ತಮ ಬೆಳೆಯಿಂದಾಗಿ ಖುಷಿಯಲ್ಲಿದ್ದ ರೈತರಿಗೆ ಕೆಲ ದಿನಗಳಿಂದ ಬಿಸಿಲಿನ ತಾಪಮಾನದಲ್ಲಿ ಏರಿಕೆಯಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಮಳೆಯಾಗದಿರುವುದು ಹೆಸರು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.
ಮಳೆ ನಂಬಿ ಹೆಸರು ಕಾಳು ಬಿತ್ತನೆ ಮಾಡಿದ್ದ ಕೊಪ್ಪಳದ ರೈತರು ಮಳೆಯಿಲ್ಲದೇ ಕಂಗಾಲು ಹೆಸರು ಕಾಳು ಬಿತ್ತನೆ ಮಾಡಿದ 8ರಿಂದ 10 ದಿನಗಳ ಬೆಳೆಗೆ ಸದ್ಯ ಮಳೆ ಅಗತ್ಯವಾಗಿದೆ. ಇಂದಲ್ಲ ನಾಳೆ ಮಳೆಯಾಗುತ್ತದೆ ಎಂದು ನಿರೀಕ್ಷೆಯಲ್ಲಿ ರೈತರು ಕಾಯುವಂತಾಗಿದೆ.
ಮಳೆಯಾಗದಿದ್ದರೆ ಹೆಸರು ಬೆಳೆ ಬಾಡುವ ಚಿಂತೆಯ ನಡುವೆಯೂ, ಮರುಭೂಮಿ ಮಿಡತೆ (ಡಸರ್ಟ್ ಲೋಕಾಸ್ಟ್) ಭಯ ಹುಟ್ಟಿಸಿದೆ. ಒಂದು ವೇಳೆ, ಬೆಳೆ ಭಕ್ಷಕ ಈ ಮಿಡತೆ ಸಮೂಹ ದಾಳಿ ನಡೆಸಿದರೆ ಈ ಬೆಳೆಯು ಮಿಡತೆಗೆ ಆಹಾರವಾಗುವ ಆತಂಕ ಮನೆ ಮಾಡಿದೆ.
ಕೃಷಿ ಇಲಾಖೆಯ ಮಾಹಿತಿ ಪ್ರಕಾರ ತಾಲೂಕಿನಲ್ಲಿ 375 ಕ್ವಿಂಟಲ್ ಹೆಸರು ದಾಸ್ತಾನು ಪೈಕಿ ಈಗಾಗಲೇ 120 ಕ್ವಿಂಟಲ್ ಬಿತ್ತನೆ ಬೀಜ ಮಾರಾಟವಾಗಿದ್ದು, ಹನುಮಸಾಗರ, ಹನುಮನಾಳ ಕುಷ್ಟಗಿ ಭಾಗದಲ್ಲಿ ಹೆಚ್ಚು ಹೆಸರು ಕಾಳು ಬಿತ್ತನೆಯಾಗಿದೆ. ಹೆಸರು 75 ದಿನಗಳ ಅಲ್ಪಾವಧಿ ಬೆಳೆಯಾಗಿದ್ದರಿಂದ ಸದ್ಯ ಒಂದು ಮಳೆಯಾದರೆ ಸಾಕು ಉತ್ತಮ ಇಳುವರಿ ಖಚಿತವಾಗಿದೆ.
ಈ ಬಾರಿ ಬಹುತೇಕ ರೈತರು ಬಿಜಿಎಸ್-9 ಸುಧಾರಿತ ತಳಿ ಬಿತ್ತನೆ ಕೈಗೊಂಡಿರುವ ಹಿನ್ನೆಲೆಯಲ್ಲಿ ಹಳದಿ ಮೋಜಾಯಿಕ್ ರೋಗ ಬಾಧೆ ಕಡಿಮೆ ಎಂದು ಕೃಷಿ ಇಲಾಖೆಯ ತಾಂತ್ರಿಕ ಸಹಾಯಕ ನಾಗನಗೌಡ ಪಾಟೀಲ್ ಈಟಿವಿ ಭಾರತ್ಗೆ ತಿಳಿಸಿದರು.