ಗಂಗಾವತಿ(ಕೊಪ್ಪಳ):ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆನೆಗೊಂದಿ ಮತ್ತು ಹಂಪೆ ಭಾಗದ ಹೋಂ ಸ್ಟೇ ಮತ್ತು ರೆಸಾರ್ಟ್ಗಳನ್ನು ಉಳಿಸುವ ಸಂಬಂಧ ಗಂಗಾವತಿ ಶಾಸಕ ಜಿ ಜನಾರ್ದನ ರೆಡ್ಡಿ ಹಾಗೂ ಹೊಸಪೇಟೆ ಶಾಸಕ ಹೆಚ್ಜಿ ಗವಿಯಪ್ಪ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ ಅಜಯ್ ಭೂಷಣ್ ಅವರನ್ನು ಭೇಟಿಯಾದ ಉಭಯ ಶಾಸಕರು, ತಮ್ಮ ಕ್ಷೇತ್ರಕ್ಕೆ ಒಳಪಡುವ ಭಾಗದಲ್ಲಿನ ಐತಿಹಾಸಿಕ, ಧಾರ್ಮಿಕ ತಾಣಗಳ ಪ್ರವಾಸೋದ್ಯಮದ ಬಗ್ಗೆ ಚರ್ಚಿಸಿದ್ದಾರೆ.
ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿರುವ ಹೋಂ ಸ್ಟೇ ಮತ್ತು ರೆಸಾರ್ಟ್ಗಳ ತೆರವು ಕಾರ್ಯಚರಣೆಯಿಂದ ಪ್ರವಾಸಿಗರಿಗೆ ಆಗಿರುವ ತೊಂದರೆಯ ಬಗ್ಗೆ ವಿವರಣೆ ನೀಡಿದ ಶಾಸಕರು, ಇಲಾಖೆಯ ವ್ಯಾಪ್ತಿಗೆ ಬರುವ ಹೋಂ ಸ್ಟೇಗಳಿಗೆ ಅನುಮತಿ ನೀಡುವಂತೆ ಕೋರಿದರು. ಇದಕ್ಕಾಗಿ ವಿಶೇಷ ಯೋಜನೆ ರೂಪಿಸಿ ಕಾರ್ಯಗತ ಮಾಡಬೇಕು, ಅಗತ್ಯವಿದ್ದರೆ ಸಿಎಂ ಬಳಿಗೆ ಹೋಗಿ ಚರ್ಚಿಸಲಾಗುವುದು. ಅಲ್ಲದೇ ಹೋಂ ಸ್ಟೇಗಳ ತೆರವು ಕಾರ್ಯಚರಣೆಯಿಂದ ಪ್ರವಾಸಿಗರಿಗೆ ಆಗಿರುವ ಸಮಸ್ಯೆಯ ಬಗ್ಗೆ ವಿವರಣೆ ನೀಡುವುದಾಗಿ ಶಾಸಕರು ಹೇಳಿದರು.
ಇದಕ್ಕೆ ಸಕರಾತ್ಮಕವಾಗಿಯೇ ಸ್ಪಂದಿಸಿದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಹೋಂ ಸ್ಟೇ ನಿರ್ಮಾಣಕ್ಕೆ ಸಾಕಷ್ಟು ಮಾನದಂಡಗಳಿವೆ. ಅಲ್ಲದೇ ಈಗಾಗಲೇ ಅಲ್ಲಿ ಹೋಂ ಸ್ಟೇ ನಿರ್ಮಾಣಕ್ಕೆ ವಿರೋಧವೂ ಇದ್ದು, ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಜಿ ಜನಾರ್ದನ ರೆಡ್ಡಿ, "ಗಂಗಾವತಿ ತಾಲೂಕಿನ ಆನೆಗೊಂದಿ ಮತ್ತು ಅಂಜನಾದ್ರಿಗಳ ಪ್ರವಾಸೋದ್ಯಮ ಬೆಳವಣಿಗೆಯಲ್ಲಿ ಹೋಂ ಸ್ಟೇಗಳ ಪಾತ್ರ ಪ್ರಮುಖವಾಗಿದೆ. ಹೀಗಾಗಿ ತೆರವು ಕಾರ್ಯಚರಣೆ ಕೈಬಿಡುವಂತೆ ಮತ್ತು ಹೋಂ ಸ್ಟೇಗಳಿಗೆ ಅನುಮತಿ ನೀಡುವಂತೆ ಕೋರಲಾಗಿದೆ. ಇದಕ್ಕೆ ಸೂಕ್ತ ಭರವಸೆ ಸಿಕ್ಕಿದೆ. ಹಂಪಿ ಅಭಿವೃದ್ಧಿ ಪ್ರಾಧಿಕಾರದ ಕಠಿಣ ಮಾನದಂಡಗಳಿಂದ ಆನೆಗೊಂದಿ ಭಾಗದ ಜನಸಾಮಾನ್ಯರು ಮನೆ, ಶೌಚಾಲಯ ನಿರ್ಮಿಸಿಕೊಳ್ಳಲು ಸಮಸ್ಯೆಯಾಗಿದೆ. ಈ ಹಿನ್ನೆಲೆ ಹೋಂ ಸ್ಟೇಗಳಿಗೆ ಇರುವ ಕಠಿಣ ಮಾನದಂಡ ಸಡಿಲಿಸುವಂತೆ ಮನವಿ ಮಾಡಲಾಗಿದೆ" ಎಂದು ಹೇಳಿದರು.
ಇದನ್ನೂ ಓದಿ:ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರುಗಳ್ಳತನ ಆರೋಪ: ತಹಶೀಲ್ದಾರ್ ಪರಿಶೀಲನೆ
ಅನಧಿಕೃತ ಚಟುವಟಿಕೆಗೆ ಬ್ರೇಕ್ ಹಾಕಲು ಸೂಚನೆ: ತುಂಗಭದ್ರಾ ನದಿಯ ಎರಡು ಭಾಗದಲ್ಲಿ ಅಂದರೆ ಹಂಪಿ ಅಭಿವೃದ್ಧಿ ಪ್ರಾಧಿಕಾರ (ಹವಾಮ) ವ್ಯಾಪ್ತಿಯಲ್ಲಿ ಬರುವ ಯುನೆಸ್ಕೋ ವಿಶ್ವ ಪರಂಪರೆಯ ತಾಣದಲ್ಲಿ ಯಾವುದೇ ಚಟುವಟಿಕೆ ನಡೆಯಬಾರದು ಎಂಬ ಆದೇಶವಿದೆ. ಆದರೆ ನ್ಯಾಯಾಲಯದ ಆದೇಶ ಮೀರಿ ಇಲ್ಲಿ ರೆಸಾರ್ಟ್, ಹೋಂ ಸ್ಟೇ, ವಾಣಿಜ್ಯ ಚಟುವಟಿಕೆ ನಡೆಯಲು ಅವಕಾಶ ನೀಡುವ ಮೂಲಕ ಹಂಪಿ ಅಭಿವೃದ್ಧಿ ಪ್ರಾಧಿಕಾರ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಹೊಸಪೇಟೆಯ ಕಲ್ಯಾಣ ಕೇಂದ್ರದ ಕೊಟ್ಟೂರು ಸ್ವಾಮಿ ಎಂಬುವವರು ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗಾಗಿ ನ್ಯಾಯಾಲಯದಿಂದ ಖಡಕ್ ಆದೇಶ ಜಾರಿಯಾಗುತ್ತಲೇ ಎಚ್ಚೆತ್ತ ಅಧಿಕಾರಿಗಳು, ಜೂ.12ರಂದು ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲಾಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿ ಅನಧಿಕೃತ ಚಟುವಟಿಕೆಗೆ ಬ್ರೇಕ್ ಹಾಕಲು ಸೂಚನೆ ನೀಡಿದ್ದರು.