ಗಂಗಾವತಿ(ಕೊಪ್ಪಳ): ಈಗಾಗಲೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸುವ ಮೂಲಕ ರಾಜಕೀಯ ಅಖಾಡಕ್ಕೆ ಇಳಿದಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಬುಧವಾರ ತಮ್ಮ ಹುಟ್ಟುಹಬ್ಬದ ಅಂಗವಾಗಿ ಗಂಗಾವತಿಯಲ್ಲಿ ಬೃಹತ್ ಬೈಕ್ ಜಾಥಾ ಆಯೋಜಿಸುವ ಮೂಲಕ ಗಮನ ಸೆಳೆದಿದ್ದಾರೆ.
ಸಾವಿರಕ್ಕೂ ಹೆಚ್ಚು ಜನರಿಂದ ಬೈಕ್ ರ್ಯಾಲಿ: ಒಂದು ಸಾವಿರಕ್ಕೂ ಅಧಿಕ ಬೈಕ್ಗಳ ಮೂಲಕ ರ್ಯಾಲಿ ಆಯೋಜಿಸಿದ್ದ ರೆಡ್ಡಿ 2023ರ ಚುನಾವಣೆಯಲ್ಲಿ ತಮ್ಮ ವಿರುದ್ಧ ಸ್ಪರ್ಧಿಸಲಿರುವ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪರೋಕ್ಷವಾಗಿ ಸಂದೇಶ ಸಾರುವಂತೆ ಶಕ್ತಿ ಪ್ರದರ್ಶನಕ್ಕೆ ಮುಂದಾದರು. ಬೆಳಗ್ಗೆ ಹತ್ತು ಗಂಟೆಗೆ ಆರಂಭವಾಗಬೇಕಿದ್ದ ರ್ಯಾಲಿ ಒಂದೂವರೆ ಗಂಟೆ ವಿಳಂಬವಾಗಿ ಆರಂಭವಾಯಿತು.
ಹಿರೇಜಂತಕಲ್ನಲ್ಲಿರುವ ವಿಜಯನಗರ ಕಾಲದ ಪಂಪಾವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಜನಾರ್ದನ ರೆಡ್ಡಿ ಬಳಿಕ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಹಿರೇಜಂತಕಲ್ ದೇವಸ್ಥಾನದಿಂದ ಕೇಂದ್ರ ಬಸ್ ನಿಲ್ದಾಣದ ಶ್ರೀಕೃಷ್ಣ ದೇವರಾಯ ವೃತ್ತ ಕೇವಲ ಮುಕ್ಕಾಲು ಕಿಲೋ ಮೀಟರ್ ಅಂತರವಿದೆ. ಇಲ್ಲಿಗೆ ರ್ಯಾಲಿ ತಲುಪಲು ಬರೋಬ್ಬರಿ ಎರಡು ಗಂಟೆಗೂ ಹೆಚ್ಚು ಸಮಯ ಹಿಡಿಯಿತು. ತೆರೆದ ವಾಹನದಲ್ಲಿ ನಿಂತಿದ್ದ ರೆಡ್ಡಿ, ರಸ್ತೆಯ ಎರಡೂ ಕಡೆಗಳಲ್ಲಿ ನಿಂತಿದ್ದ ಯುವಕರು, ಮಹಿಳೆಯರು, ವೃದ್ಧರು, ಅಭಿಮಾನಿಗಳು, ಕಾರ್ಯಕರ್ತರತ್ತ ಕೈಬೀಸಿ, ಕೈಮಗಿಯುತ್ತಿದ್ದರು. ರೆಡ್ಡಿ ಅಭಿಮಾನಿಗಳು ಹೂವಿನ ಮಳೆಗರೆದು ಅಭಿನಂದನೆ ಸಲ್ಲಿಸಿದರು. ಬಸವೇಶ್ವರ ವೃತ್ತದಲ್ಲಿರುವ ಮಾಜಿ ಸಂಸದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಚ್.ಜಿ. ರಾಮುಲು ಅವರ ನಿವಾಸದ ಮುಂದೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರೆಡ್ಡಿ ಅಭಿಮಾನಿಗಳು, ಕೆಆರ್ಪಿ ಪಕ್ಷದ ಕಾರ್ಯಕರ್ತರು ಮೆರವಣಿಗೆ ಮಾಡಿದರು.
ಸೆಲ್ಫಿ ಕ್ಲಿಕ್ಕಿಸಿಕೊಂಡ ಮಾಜಿ ಸಚಿವ.. ಮೆರವಣಿಗೆಯುದ್ದಕ್ಕೂ ರೆಡ್ಡಿ, ಅಭಿಮಾನಿಗಳಿಗೆ ಹಸ್ತಲಾಘವ ಮಾಡುತ್ತಿದ್ದರು. ಕೆಲ ಯುವಕರ ಮನವಿ ಮೇರೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದುದು ಕಂಡುಬಂತು. ಮಗುವೊಂದನ್ನು ಎತ್ತಿಕೊಂಡು ಫೊಟೋ ಕ್ಲಿಕ್ಕಿಸಿಕೊಂಡರು. ಅಲ್ಲದೇ ವಿಜಯದ ಸಂಕೇತವನ್ನು ತೋರಿಸಿದರು. ರೆಡ್ಡಿಯಿಂದ ಪ್ರೇರಣೆಗೊಂಡ ಮಗು ಕೂಡ ವಿಜಯದ ಸಂಕೇತ ತೋರಿ ಗಮನ ಸೆಳೆಯಿತು. ಇದು ಪಕ್ಷದ ಕಾರ್ಯಕರ್ತರಲ್ಲಿ ಹರ್ಷೋದ್ಘಾರಕ್ಕೆ ಕಾರಣವಾಯಿತು.