ಕೊಪ್ಪಳ: ಕೊರೊನಾ ಸಂದರ್ಭದಲ್ಲಿ ಸರ್ಕಾರ ನಡೆದುಕೊಂಡ ರೀತಿ ಸರಿ ಇಲ್ಲ. ಈಗ ಈ ನಿಟ್ಟಿನಲ್ಲಿ ಸರ್ಕಾರ ನುಣುಚಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದ್ದಾರೆ.
ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಆರಂಭದಲ್ಲಿಯೇ ರಾಹುಲ್ ಗಾಂಧಿ ಹೇಳಿದ್ದರು. ಆದರೂ ಸರ್ಕಾರ ನಿರ್ಲಕ್ಷ್ಯ ಮಾಡಿತು ಎಂದಿದ್ದಾರೆ.
‘ಆತ್ಮ ನಿರ್ಭರ ಎಂದೆಲ್ಲಾ ಮಾತನಾಡುವ ಬಿಜೆಪಿ ಸರ್ಕಾರ ಆತ್ಮವನ್ನೇ ಕಳೆದುಕೊಂಡಿದೆ': ಉಮಾಶ್ರೀ ಸರ್ಕಾರ ಅಮಾನವೀಯತೆಯಿಂದ ನಡೆದುಕೊಳ್ಳುತ್ತಿದೆ. ಆತ್ಮ ನಿರ್ಭರದ ಬಗ್ಗೆ ಮಾತನಾಡುವ ಬಿಜೆಪಿ ಸರ್ಕಾರ ಆತ್ಮವನ್ನೇ ಕಳೆದುಕೊಂಡಿದೆ. ಕೋವಿಡ್ -19 ನಲ್ಲಿ ಆಗಿರುವ ಅವ್ಯವಹಾರದ ತನಿಖೆಯಾಗಬೇಕು. ಈ ಕುರಿತಂತೆ ಅಧಿವೇಶನದಲ್ಲಿ ಅವರ ಮುಖವಾಡವನ್ನು ಕಳಚುವ ಪ್ರಯತ್ನವನ್ನು ನಮ್ಮ ಪಕ್ಷ ಮಾಡಲಿದೆ ಎಂದರು.
ರಾಜ್ಯದಲ್ಲಿ ಈಗ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಸೋಂಕು ಹೆಚ್ಚಾಗುತ್ತಿದೆ. ಬೇರೆ ರಾಜ್ಯಗಳಲ್ಲಿ ಕೊರೊನಾ ಕಂಟ್ರೋಲ್ ಮಾಡುವ ಸಾಧ್ಯತೆ ಇರುವಾಗ ನಮ್ಮ ರಾಜ್ಯದಲ್ಲಿ ಕಂಟ್ರೋಲ್ ಮಾಡಲು ರಾಜ್ಯ ಸರ್ಕಾರಕ್ಕೆ ಏಕೆ ಆಗ್ತಿಲ್ಲ ಎಂದು ಪ್ರಶ್ನಿಸಿದರು. ಅಲ್ಲದೆ ರಾಜ್ಯ ಸರ್ಕಾರ ಕೊರೊನಾ ಕಂಟ್ರೋಲ್ ಮಾಡಲು ಸರಿಯಾದ ಪೂರ್ವ ತಯಾರಿ ಮಾಡಿಕೊಳ್ಳಲಿಲ್ಲ ಎಂದು ಆರೋಪಿಸಿದರು.
ಇದಲ್ಲದೆ ವೈದ್ಯರು, ನರ್ಸ್ಗಳು, ಆಶಾ ಕಾರ್ಯಕರ್ತೆಯರಿಗೆ ಬೇಕಾದ ಸುರಕ್ಷಾ ಸಾಧನಗಳನ್ನು ಕೊಡಲಿಲ್ಲ. ಕೊರೊನಾ ಹೆಸರಿನಲ್ಲಿ 2,000 ಕೋಟಿ ರೂಪಾಯಿ ಲೂಟಿಯಾಗಿದೆ ಎಂಬ ಅನುಮಾನವಿದೆ ಎಂದರು.
ಒಬ್ಬ ಜವಾಬ್ದಾರಿಯುತ ನಮ್ಮ ನಾಯಕರು ಈ ಬಗ್ಗೆ ಹೇಳುತ್ತಾರೆ ಎಂದರೆ ಅದರಲ್ಲಿ ಒಂದು ಅರ್ಥವಿದೆ. ಸಾರ್ವಜನಿಕ ಹಣ ಲೂಟಿಯಾಗಿದೆ. ಇಂತಹ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗಿರುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ. ಹೀಗಾಗಿ ಕೋವಿಡ್-19 ಉಪಕರಣ ಖರೀದಿಯಲ್ಲಾಗಿರುವ ಅವ್ಯವಹಾರ ಕುರಿತಂತೆ ನ್ಯಾಯಾಧೀಶರ ಮೂಲಕ ತನಿಖೆಯಾಗಬೇಕು ಎಂದು ಆಗ್ರಹಿಸಿದರು.