ಕೊಪ್ಪಳ: ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಭರದಿಂದ ಸಾಗಿದ್ದು ಆಶಾದಾಯಕವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ಬಾರಿ ಸೂರ್ಯಕಾಂತಿ ಬಿತ್ತನೆ ಮಾಡುವಲ್ಲಿ ರೈತರು ಹೆಚ್ಚಿನ ಒಲವು ತೋರಿದ್ದಾರೆ. ಬೇರೆ ಬೇರೆ ಬೆಳೆಯ ಜೊತೆಗೆ ಸೂರ್ಯಕಾಂತಿ ಬಿತ್ತನೆಯೂ ಚುರುಕಾಗಿದೆ. ಅಡುಗೆ ಎಣ್ಣೆಯ ದರ ಹೆಚ್ಚಳವಾಗಿರುವುದರಿಂದ ಸೂರ್ಯಕಾಂತಿಗೆ ಹೆಚ್ಚಿನ ಬೆಲೆ ಸಿಗುವ ನೀರಿಕ್ಷೆಯೊಂದಿಗೆ ರೈತರು ಸೂರ್ಯಕಾಂತಿಯನ್ನು ಬಿತ್ತನೆ ಮಾಡುತ್ತಿದ್ದಾರೆ.
ಮುಂಗಾರು ಪೂರ್ವ ಹಾಗೂ ಮುಂಗಾರು ಬಿತ್ತನೆಗೆ ವರುಣನ ಕೃಪೆಯಾಗಿರುವುದರಿಂದ ಜಿಲ್ಲೆಯಲ್ಲಿಯೂ ಮುಂಗಾರು ಕೃಷಿ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ. ಈಗಾಗಲೇ ಬಹಳಷ್ಟು ರೈತರು ವಿವಿಧ ಬೆಳೆಗಳ ಬೀಜ ಬಿತ್ತನೆಯನ್ನು ಮಾಡಿದ್ದು, ಇನ್ನೂ ಕೆಲ ಭಾಗಗಳಲ್ಲಿ ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸೂರ್ಯಕಾಂತಿ ಬೆಳೆಯ ಬೀಜವನ್ನು ಬಿತ್ತನೆ ಮಾಡಲು ರೈತರು ಹೆಚ್ಚಿನ ಒಲವು ತೋರಿದ್ದಾರೆ.
ಸೂರ್ಯಕಾಂತಿ ಬಿತ್ತನೆಗೆ ಹೆಚ್ಚು ಒಲವು ತೋರಿದ ಅನ್ನದಾತ ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೂರ್ಯಕಾಂತಿ ಬಿತ್ತನೆಗೆ ರೈತರು ಮುಂದಾಗಿದ್ದಾರೆ. ಈಗಾಗಲೇ ಸುಮಾರು 13 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿಯನ್ನ ಬಿತ್ತಲಾಗಿದೆ. ಸೂರ್ಯಕಾಂತಿ ಬೀಜ ಬಿತ್ತನೆಗೆ ಇನ್ನೂ ಒಂದಿಷ್ಟು ಸಮಯಾವಕಾಶ ಇರುವುದರಿಂದ ಸೂರ್ಯಕಾಂತಿ ಬಿತ್ತನೆಯ ಪ್ರದೇಶ ಮತ್ತಷ್ಟು ಹೆಚ್ಚಾಗಲಿದೆ. ಜಿಲ್ಲೆಯ ಉಳಿದ ತಾಲೂಕುಗಳಿಗೆ ಹೋಲಿಸಿದರೆ ಕುಷ್ಟಗಿ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದ ಬಿತ್ತನೆ ಆಗಿದೆ.
ಕೊರೊನಾ ಸೋಂಕಿನ ಭೀತಿಯಿಂದಾದ ಲಾಕ್ ಡೌನ್ ನಲ್ಲಿ ಅಡುಗೆ ಎಣ್ಣೆಯ ಬೆಲೆಯೂ ಗಗನಕ್ಕೇರಿದೆ. ಸನ್ ಫ್ಲವರ್ ಅಡುಗೆ ಎಣ್ಣೆ ಒಂದು ಲೀಟರ್ ಗೆ 170 ರಿಂದ 180 ರೂಪಾಯಿ ದರವಾಗಿದೆ. ಇದರಿಂದಾಗಿ ಸೂರ್ಯಕಾಂತಿಗೆ ಹೆಚ್ಚಿನ ಡಿಮ್ಯಾಂಡ್ ಸೃಷ್ಟಿಯಾಗಿದೆ. ಹೀಗಾಗಿ ಸೂರ್ಯಕಾಂತಿ ಬೆಳೆಗೆ ಉತ್ತಮ ಬೆಲೆ ಸಿಗಬಹುದು ಎಂಬ ಆಶಾಭಾವದಿಂದ ರೈತರು ಕಳೆದ ವರ್ಷಕ್ಕಿಂತಲೂ ತುಸು ಹೆಚ್ಚಿನ ಪ್ರಮಾಣದಲ್ಲಿ ಸೂರ್ಯಕಾಂತಿಯನ್ನು ಈ ಬಾರಿ ಬಿತ್ತನೆ ಮಾಡಿದ್ದಾರೆ ಎನ್ನುತ್ತಾರೆ ಯಲಬುರ್ಗಾ ತಾಲೂಕಿನ ಮರ್ಕಟ್ ಗ್ರಾಮದ ರೈತ ಹನುಮಂತ.
ಕಳೆದ ಐದು ವರ್ಷದಲ್ಲಿ ಸೂರ್ಯಕಾಂತಿ ಬಿತ್ತನೆಗೆ ರೈತರು ಅಷ್ಟೊಂದು ಒಲವು ತೋರಿಲ್ಲ. ಆದರೆ ಈ ವರ್ಷ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಹೆಚ್ಚಾಗಿದೆ. ಇದರಿಂದಾಗಿ ಸೂರ್ಯಕಾಂತಿಯ ಬೆಲೆ ಕ್ವಿಂಟಾಲ್ ಗೆ ಆರರಿಂದ ಏಳು ಸಾವಿರ ರೂಪಾಯಿ ದರವಿದೆ. ಹೀಗಾಗಿ ಜಿಲ್ಲೆಯಲ್ಲಿ ರೈತರು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸೂರ್ಯಕಾಂತಿ ಬಿತ್ತನೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಸೂರ್ಯಕಾಂತಿ ಬೀಜಕ್ಕೆ ದಿಢೀರ್ ಬೇಡಿಕೆ ಬಂದ ಪರಿಣಾಮ ಒಂದಿಷ್ಟು ಸಮಸ್ಯೆಯಾಗಿದೆ. ಆದರೆ ಆ ಸಮಸ್ಯೆಯನ್ನು ಬಗೆಹರಿಸಲಾಗಿದೆ. ರೈತರಿಗೆ ಸೂರ್ಯಕಾಂತಿ ಬೀಜವನ್ನು ತೊಂದರೆಯಾಗದಂತೆ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆಯ ಪ್ರಭಾರಿ ಜಂಟಿ ನಿರ್ದೇಶಕ ಎಲ್. ಸಿದ್ದೇಶ್ವರ ತಿಳಿಸಿದ್ದಾರೆ.