ಹೇಮಗುಡ್ಡದಲ್ಲಿ ದಸರಾದ ಜಂಬೂಸವಾರಿ ಗಂಗಾವತಿ:ಕಲ್ಯಾಣ ಕರ್ನಾಟಕ ಭಾಗದ ಮೈಸೂರು ದಸರಾ ಎಂದೇ ಖ್ಯಾತಿ ಪಡೆದ ತಾಲೂಕಿನ ಹೇಮಗುಡ್ಡದಲ್ಲಿ ಸೋಮವಾರ ಸಂಜೆ ಜಂಬೂ ಸವಾರಿ ಸಂಭ್ರಮದಿಂದ ನೆರವೇರಿತು. ಆನೆಯ ಮೇಲೆ ಶ್ರೀದುರ್ಗಾ ಪರಮೇಶ್ವರಿ ದೇವಿಯನ್ನಿಟ್ಟು ಮೆರವಣಿಗೆ ಮಾಡಲಾಯಿತು.
ದಸರಾ ಅಂಗವಾಗಿ ಹೇಮಗುಡ್ಡದ ಶ್ರೀದುರ್ಗಾ ಪರಮೇಶ್ವರಿ ದೇಗುಲದಲ್ಲಿ ಕಳೆದ ಒಂಬತ್ತು ದಿನಗಳಿಂದ ಧರ್ಮಕರ್ತ ಮಾಜಿ ಶಾಸಕ ಹೆಚ್.ಆರ್.ಶ್ರೀನಾಥ್ ನೇತೃತ್ವದಲ್ಲಿ ನಿತ್ಯ ವಿಶೇಷ ಪೂಜೆ, ಅಲಂಕಾರ, ಹೋಮಗಳು ನಡೆದವು. ಇಂದು ಅಲಂಕೃತ ಆನೆಯ ಮೇಲೆ ಶ್ರೀ ದುರ್ಗಾ ಪರಮೇಶ್ವರಿ ದೇವಿಯ ಮೆರಣಿಗೆಗೆ ಮಾಜಿ ಸಂಸದ ಹೆಚ್.ಜಿ.ರಾಮುಲು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ದೇಗುಲದಿಂದ ಆರಂಭವಾದ ಜಂಬೂಸವಾರಿ ಒಂದೂವರೆ ಕಿಲೋ ಮೀಟರ್ ಅಂತರದಲ್ಲಿರುವ ಪಾದಗಟ್ಟೆಗೆ ತೆರಳಿ ಪೂಜೆ ಸಲ್ಲಿಸಿ, ಬಳಿಕ ವಾಪಸ್ ದೇವಸ್ಥಾನಕ್ಕೆ ಬಂತು. ಶಮಿ ಮುಡಿಯುವ ಮೂಲಕ ವಿಜಯದಶಮಿ ಆಚರಿಸಲಾಯಿತು. ಜಂಬೂ ಸವಾರಿಯ ಮೆರವಣಿಗೆಗೆ ಸುತ್ತಲಿನ ಜಿಲ್ಲೆಗಳಿಂದ ಆಗಮಿಸಿದ್ದ ನಾನಾ ಕಲಾತಂಡಗಳು ಮೆರುಗು ನೀಡಿದವು.
ಕೊಪ್ಪಳ ಲೋಕಸಭಾ ಸದಸ್ಯ ಕರಡಿ ಸಂಗಣ್ಣ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಹೊಸಪೇಟೆಯ ಶಾಸಕ ಹೆಚ್.ಆರ್.ಗವಿಯಪ್ಪ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ಕೊಪ್ಪಳ ಜಿಲ್ಲೆಯ ಹಾಲಿ-ಮಾಜಿ ಚುನಾಯಿತ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಮೈಸೂರು ಅರಮನೆಯಲ್ಲಿ ಆಯುಧ ಪೂಜೆ:ಅರಮನೆಯ ಕಲ್ಯಾಣ ಮಂಟಪದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ಆಯುಧಗಳಿಗೆ ಸೋಮವಾರ ಆಯುಧ ಪೂಜೆ ನೆರವೇರಿಸಿದರು. ಇದಕ್ಕೂ ಮುನ್ನ ಬೆಳಿಗ್ಗೆ ಆಯುಧಗಳನ್ನು ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಸಮೀಪ ತೆಗೆದುಕೊಂಡು ಹೋಗಿ ಸ್ವಚ್ಛಗೊಳಿಸಲಾಗಿತ್ತು. ನಂತರ ಅವುಗಳನ್ನು ಕಲ್ಯಾಣ ಮಂಟಪಕ್ಕೆ ತಂದಿಟ್ಟು ಸಾಂಪ್ರದಾಯಿಕ ಪೂಜಾ ವಿಧಿಯನ್ನು ಮಧ್ಯಾಹ್ನ 12.20 ರಿಂದ 12.45 ರ ಶುಭ ಲಗ್ನದಲ್ಲಿ ಯದುವೀರ್ ನೇರವೇರಿಸಿದರು.
ಕನ್ನಡಿ ತೊಟ್ಟಿಯಲ್ಲಿ ಪಟ್ಟದ ಹಸು, ಪಟ್ಟದ ಕುದುರೆ, ಪಟ್ಟ ಆನೆ ಹಾಗೂ ಅರಮನೆಯ ಹೆಣ್ಣಾನೆಗಳು ಮತ್ತು ತಾವು ಬಳಸುವ ಖಾಸಗಿ ದುಬಾರಿ ಬೆಳೆಯ ಕಾರುಗಳಿಗೆ ಅವರು ಪೂಜೆ ಸಲ್ಲಿಸಿದರು. ಇದಾದ ನಂತರ ಕನ್ನಡಿ ತೊಟ್ಟಿಯ ಆಯುಧ ಪೂಜೆ ಮುಕ್ತಾಯವಾಯಿತು.
ಇದನ್ನೂ ಓದಿ:ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ನೆರವೇರಿಸಿದ ಯದುವೀರ್: ವಿಡಿಯೋ